ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಗ್ರಾಮೀಣ ಕ್ರೀಡೆಗಳು ಸಂಬಂಧಗಳನ್ನು ಬೆಸೆಯುತ್ತದೆ: ಶಿವಾನಂದ ನಾಯ್ಕ

ಭಟ್ಕಳ: ಗ್ರಾಮೀಣ ಕ್ರೀಡೆಗಳು ಸಂಬಂಧಗಳನ್ನು ಬೆಸೆಯುತ್ತದೆ: ಶಿವಾನಂದ ನಾಯ್ಕ

Tue, 20 Oct 2009 02:27:00  Office Staff   S.O. News Service
ಭಟ್ಕಳ, ಅಕ್ಟೋಬರ್ ೧೯: ನಮ್ಮ ಪರಂಪರೆಯ ಪ್ರತೀಕವಾಗಿರುವ ಗ್ರಾಮೀಣ ಕ್ರೀಡೆಗಳು ಜಾತಿ, ಪಂಥಗಳನ್ನು ತೊಡೆದು ಹಾಕಿ ಸಂಬಂಧಗಳನ್ನು ಬೆಸೆಯುತ್ತದೆ. ಹೊಟ್ಟೆಯ ಹಿಟ್ಟಿಗಾಗಿ ಹುಡುಕಿಕೊಂಡ ಉದ್ಯೋಗವೇ ಕ್ರೀಡೆಯಾಗಿ, ಪ್ರತಿಭೆ ಹಾಗೂ ಸಾಮರ್ಥ್ಯಗಳ ಸಾಕಾರಕ್ಕಿರುವ ನೆಲೆಯಾಗಿ ರೂಪುಗೊಂಡಿರುವುದನ್ನು ಕಾಣುತ್ತೇವೆ ಎಂದು ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ ಇದರ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವಾನಂದ ನಾಯ್ಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
18vd4.jpg
18vd3.jpg
 
 ಅವರು ದೀಪಾವಳಿಯ ಪ್ರಯುಕ್ತ ಕೊಂಕಣಿ ಖಾರ್ವಿ ಫ್ರೆಂಡ್ಸ ಆಶ್ರಯದಲ್ಲಿ ಭಟ್ಕಳ ಬಂದರಿನಲ್ಲಿ ನಡೆದ ಪಾತಿ ದೋಣಿ ಹಾಗೂ ಈಜು ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರಿಕೆಟ್ ಅಬ್ಬರದಲ್ಲಿ ಉಳಿದ ಕ್ರೀಡೆಗಳು ನಾಶವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಜವಾಬ್ದಾರಿ ಯುವಕರ ಮೇಲಿದೆ. ರೈತರ, ಮೀನುಗಾರರ ಮಧ್ಯದಲ್ಲಿ ಹುಟ್ಟಿದ ಅದೆಷ್ಟೋ ಹಾಡುಗಳೂ ಕಣ್ಮರೆಯಾಗುತ್ತಿದ್ದು ಮಾನಸಿಕ ನೆಮ್ಮದಿಯಿಂದ ವಿಮುಖರಾಗುವ ಮುನ್ನ ಗ್ರಾಮೀಣ ಬದುಕಿನತ್ತ ಮತ್ತೊಮ್ಮೆ ಕಣ್ಣು ಹಾಯಿಸಬೇಕಾದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ತಾಲೂಕು ಪಂಚಾಯತ ಸದಸ್ಯ ಪರಮೇಶ್ವರ ದೇವಾಡಿಗ ಗ್ರಾಮೀಣ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಒಯ್ಯಬೇಕಾದ ಅಗತ್ಯವನ್ನು ತಿಳಿಸಿದರು. ಹಿರಿಯ ಧುರೀಣ ವಸಂತ ಖಾರ್ವಿ ಕ್ರೀಡೆಯ ಮಹತ್ವವನ್ನು ವಿವರಿಸಿದರು. ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ನಾರಾಯಣ ದೇವಪ್ಪ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಜಾಲಿ ಗ್ರಾಮೀಣ ವ್ಯವಸಾಯ ಬ್ಯಾಂಕಿನ ಉಪಾಧ್ಯಕ್ಷ ರತ್ನಾಕರ ಖಾರ್ವಿ, ಶಾರದೋತ್ಸವ ಸಮಿತಿಯ ಅಧ್ಯಕ್ಷ ನಾಗೇಂದ್ರ ಖಾರ್ವಿ, ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು. ತಾಲೂಕಿನ ಪ್ರಮುಖ ಕ್ರೀಡಾ ಪಟುಗಳಾದ ಬಾಬು ಮಂಜುನಾಥ ಖಾರ್ವಿ ಹಾಗೂ ಸುನಿಲ್ ನಾಯ್ಕ ಶಿರಾಲಿ ಇವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ರಾಮದಾಸ ಖಾರ್ವಿ ಎಲ್ಲರನ್ನೂ ಸ್ವಾಗತಿಸಿದರು. ಪಾಂಡುರಂಗ ನಾಯ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಗೋವಿಂದ ಖಾರ್ವಿ ವಂದಿಸಿದರು.
 
18vd5.jpg 
ಪಾತಿ ದೋಣಿ ಸ್ಪರ್ಧೆಯಲ್ಲಿ ಭಾಸ್ಕರ ಖಾರ್ವಿ ಪ್ರಥಮ

ದೀಪಾವಳಿಯ ಪ್ರಯುಕ್ತ ಭಟ್ಕಳ ಬಂದರಿನಲ್ಲಿ ನಡೆದ ಪಾತಿ ದೋಣಿ ಸ್ಪರ್ಧೆಯಲ್ಲಿ ಭಾಸ್ಕರ ಖಾರ್ವಿ ಪ್ರಥಮ ಸ್ಥಾನವನ್ನು ಗಳಿಸಿದ್ದು, ಸುರೇಶ ಖಾರ್ವಿ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡರು. ಸೂರ್‍ಯ ಶೇಷ ಖಾರ್ವಿ ತೃತೀಯ ಸ್ಥಾನವನ್ನು ಅಲಂಕರಿಸಿದರು. ಸ್ಪರ್ಧಾಳುಗಳು ಸುಮಾರು ಒಂದೂವರೆ ಕಿಲೋಮೀಟರು ದೂರ ಸಮುದ್ರ ಮಾರ್ಗವಾಗಿ ದೋಣಿಗಳನ್ನು ಚಲಿಸಿ ಹಿಂತಿರುಗಿದರು. ಸ್ಪರ್ಧೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಎರಡು ಬೋಟುಗಳನ್ನು ಬಳಸಲಾಯಿತು. ಕೆಸಡಿಲ್ ಅಧ್ಯಕ್ಷ ಶಿವಾನಂದ ನಾಯ್ಕ ಸೇರಿದಂತೆ ಹಲವಾರು ಪ್ರಮುಖರು ಬೋಟಿನ ಮೂಲಕ ಪ್ರಯಾಣ ಬೆಳೆಸಿ ಸ್ಪರ್ಧಾಳುಗಳನ್ನು ಉತ್ತೇಜಿಸಿದರು.
 
 18vd6.jpg
ಈಜು ಸ್ಪರ್ಧೆಯಲ್ಲಿ ದಿನೇಶ ಹರಿಕಂತ ಪ್ರಥಮ: ಈಜು ಸ್ಪರ್ಧೆಯಲ್ಲಿ ದಿನೇಶ ಹರಿಕಂತ ಪ್ರಥಮ ಹಾಗೂ ನಿತ್ಯಾನಂದ ಕೃಷ್ಣ ಹರಿಕಂತ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಅತ್ಯಂತ ಕುತೂಹಲಕಾರಿಯಾಗಿ ನಡೆದ ಸ್ಪರ್ಧೆಯ ಸಂತೋಷವನ್ನು ನೂರಾರು ಜನರು ಬಿರುಬಿಸಿಲಿನಲ್ಲಿ ನಿಂತು ಸವಿದರು. ಸುಮಾರು ಇನ್ನೂರು ಮೀಟರು ಅಂತರವನ್ನು ಸ್ಪರ್ಧೆಯಲ್ಲಿ ನಿಗದಿಪಡಿಸಲಾಗಿತ್ತು. 
 

Share: