ಭಟ್ಕಳ: ಇಲ್ಲಿನ ಸೋನಾರಕೇರಿಯ ನಟರಾಜ ನೃತ್ಯ ಶಾಲೆಯ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಭರತನಾಟ್ಯ ಪ್ರದರ್ಶನ-೨೦೧೦ ಕಾರ್ಯಕ್ರಮಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಲೆನಾಡಿಗಷ್ಟೇ ಸೀಮಿತವಾಗಿದ್ದ ಭರತನಾಟ್ಯ, ಸಂಗೀತ ಇಂದು ಕರಾವಳಿಯಲ್ಲಿಯೂ ಕಾಲಿಟ್ಟು ಉತ್ತಮ ಪ್ರತಿಭೆಗಳನ್ನು ಹುಟ್ಟು ಹಾಕುವಲ್ಲಿ ಶಿಕ್ಷಕರು ಯಶಸ್ವಿಯಾಗಿದ್ದಾರೆ. ಮಕ್ಕಳಿಗೆ ಕೇವಲ ಓದು ಬರಹ ಮಾತ್ರ ಶಿಕ್ಷಣವಲ್ಲ, ಕಲೆ, ಸಂಗೀತ, ಭರತನಾಟ್ಯ ಮಕ್ಕಳನ್ನು ಸಂತಸವಾಗಿಡಲು ಸಹಕಾರಿ ಎಂದೂ ಹೇಳಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನೃತ್ಯಗುರು ವಿಧೂಷಿ ಸೀಮಾ ಭಾಗ್ವತ್ ಅವರು ಮಾತನಾಡಿ ಕಲೆಯಲ್ಲಿ ಸಾಧನೆಯನ್ನು ತೋರಲು ಎಲ್ಲರದಿಂದ ಮಾತ್ರ ಸಾದ್ಯ. ನಮ್ಮ ಪರಂಪರೆ, ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲು ಕೂಡಾ ಕಲೆಯೊಂದು ಮಾಧ್ಯಮ ಎಂದರು. ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಅರಿತು ಆ ದಿಶೆಯಲ್ಲಿ ಅವರನ್ನು ತರಬೇತಿಗೊಳಿಸಿದರೆ ಮುಂದೆ ಅವರು ಉತ್ತಮ ಕಲಾಕಾರರಾಗಲು ಸಹಕಾರಿ ಎಂದೂ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ರಾಧಾಕೃಷ್ಣ ಭಟ್ಟ, ಯುವಕ ಮಂಡಳದ ಅಧ್ಯಕ್ಷ ಶ್ರೀಧರ ನಾಯ್ಕ, ನೃತ್ಯ ಶಾಲೆಯ ಸಂಸ್ಥಾಪಕಿ ಮುಕ್ತಾ ನಾಯಕ, ಬಿ.ಆರ್. ಪಿ. ಸಮನ್ವಯಾಧಿಕಾರಿ ಯಲ್ಲಮ್ಮ ಮಾತನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷೆ ಗೀತಾ ಶೇಟ್, ಸಮಾಜ ಸೇವಕಿ ಪದ್ಮಾ ಭಾಸ್ಕರ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಸಂಧ್ಯಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಶಿಕ್ಷಕ ಎಸ್. ಕೆ. ಜಂಭೂರ್‌ಮಠ ಸ್ವಾಗತಿಸಿದರು. ನ್ಯತ್ಯ ಗುರು ಸ್ಮಿತಾ ನಾಯಕ ವರದಿ ವಾಚನ ಮಾಡಿದರು. ಶಾರದಾ ನಾಯ್ಕ ವಂದಿಸಿದರು.