ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಬಳ್ಳಾಪುರ ಜಿಲ್ಲಾಡಳಿತವನ್ನು ಮಣಿಸಿದ ಆಹಾರದ ಹಕ್ಕು ಹೋರಾಟ

ಚಿಕ್ಕಬಳ್ಳಾಪುರ ಜಿಲ್ಲಾಡಳಿತವನ್ನು ಮಣಿಸಿದ ಆಹಾರದ ಹಕ್ಕು ಹೋರಾಟ

Sat, 06 Feb 2010 14:44:00  Office Staff   S.O. News Service

ಪಡಿತರ ವ್ಯವಸ್ಥೆಯನ್ನು ದುರ್ಬಲಗೊಳಿಸಿದ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಎಲ್ಲಾ ಜನತೆಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದ ಕೇಂದ್ರ ಹಾಗೂ ರಾಜ್ಯ ಸಕರ್ಾರದ ಜನವಿರೋಧಿ ನೀತಿ ಪ್ರಶ್ನಿಸಿ ಸಿಪಿಐ(ಎಂ) ಪಕ್ಷ ಕೊಟ್ಟಿದ್ದ ರಾಜ್ಯವ್ಯಾಪಿ ಕರೆಗೆ ಓಗೊಟ್ಟು ಬೀದಿಗಿಳಿದ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ, ಜನವರಿ 11, 12, 13 ರಂದು ಎಲ್ಲಾ ತಾಲ್ಲೂಕು ಕಛೇರಿ ಮುಂದೆ ಧರಣಿ ನಡೆಸಿತು. ಅದರ ಮುಂದುವರಿದ ಭಾಗವಾಗಿ ಜನವರಿ 21, 22, 23 ರಂದು ದಿನಕ್ಕೆರಡು ತಾಲ್ಲೂಕಿನಂತೆ, ಸಿಪಿಎಂ ಸೇರಿದಂತೆ ಜನವಾದಿ ಮಹಿಳಾ ಸಂಘಟನೆ, ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳ ಒಕ್ಕೂಟ, ಡಿವೈಎಫ್ಐ, ಎಸ್ಎಫ್ಐ, ಸಿಐಟಿಯು, ಪ್ರಾಂತ ರೈತ ಸಂಘ, ಪ್ರಾಂತ ಕೃಷಿ ಕೂಲಿಕಾರ ಸಂಘ ಎಲ್ಲಾ ಸಾಮೂಹಿಕ ಸಂಘಟನೆಗಳು ಸೇರಿ ಆಹಾರ ಭದ್ರತೆ ಗಗನಕ್ಕೆರಿರುವ ಅಗತ್ಯ ವಸ್ತುಗಳ ಬೆಲೆ ಇಳಿಕೆ ಹಾಗೂ ಪಡಿತರ ಚೀಟಿಯಲ್ಲಿನ ಲೋಪ ಸರಿಪಡಿಸಿ, ಉಳಿಕೆ ಪಡಿತರದಾರರಿಗೆ ಫೋಟೋ ತೆಗೆಯಲು ಹಾಗೂ ಎಲ್ಲರಿಗೂ 2 ರೂ. ದರದಲ್ಲಿ 35 ಕೆ.ಜಿ. ಅಕ್ಕಿ ನೀಡಲು ಒತ್ತಾಯಿಸಿ 3 ದಿನಗಳ ಕಾಲ ಜಿಲ್ಲಾ ಕೇಂದ್ರಕ್ಕೆ ಪ್ರತಿದಿನ 7 ಕಿ.ಮೀ ದೂರದ ನಗರದ ಪ್ರವಾಸಿ ಮಂದಿರದಿಂದ ಮಟಮಟ ಮದ್ಯಾಹ್ನ ಕೈಯಲ್ಲಿ ಕೆಂಬಾವುಟ ಹಿಡಿದು ಬಿರುಬಿರು ಹೆಜ್ಜೆ ಹಾಕುತ್ತಾ ಮುಗಿಲು ಮುಟ್ಟುವ ಘೋಷಣೆಯೊಂದಿಗೆ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಜನ ಬಂಧನಕ್ಕೊಳಗಾಗಿ ನಂತರ ಬಿಡುಗಡೆಗೊಂಡರು.

ಪೊಲೀಸ್ನವರ ಬ್ಯಾರಿಕೇಡ್ ಬೇಧಿಸಲು ನುಗ್ಗಿದಾಗ ಪೊಲೀಸ್ನವರೊಟ್ಟಿಗೆ ತಳ್ಳಾಟ, ನೂಕಾಟ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನಿಮ್ಮ ಹೋರಾಟ ಕೈಬಿಡಿ ನಾನು ಮುಂದೆ ಸಭೆ ಕರೆದು ಮಾತನಾಡುತ್ತೇನೆಂದರೂ ಪಟ್ಟುಸಡಿಲಿಸಲಿಲ್ಲ. ಜಿಲ್ಲಾಧಿಕಾರಿ ಮತ್ತು ಜಿ.ವಿ.ಶ್ರೀರಾಮರೆಡ್ಡಿಯವರ ನಡುವೆ ಮಾತಿನ ಚಕಮಕಿ ನಡೆಯಿತು. ನಾವು ಸೆಪ್ಟೆಂಬರ್ನಿಂದ ಹೋರಾಟ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಗುಡಿಬಂಡೆಗೆ ಆಗಮಿಸಿದಾಗ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿದೆ. ಇಷ್ಟಾದರೂ ಹೋರಾಟದಲ್ಲಿ ನಿರತರಾಗಿರುವ ಸಂಘಟನೆಗಳನ್ನು ಕರೆಸಿ ಮಾತನಾಡುವ ಕನಿಷ್ಠ ಸೌಜನ್ಯವನ್ನು ಜಿಲ್ಲಾಧಿಕಾರಿ ತೋರಿಲ್ಲ. ನಮ್ಮ ತಾಳ್ಮೆಗೆ ಮಿತಿಮೀರಿದೆ. ಈಗ ನೀವು ನೀಡುವ ಭರವಸೆ ಕೇಳಿ ನಾವು ವಾಪಸ್ ಹೋಗುವುದಿಲ್ಲ. ಜಿಲ್ಲಾಧಿಕಾರಿ ಕಛೇರಿಗೆ ಬೀಗ ಜಡಿಯುತ್ತೇವೆ. ನಿಮ್ಮ ಕೈಲಾದ್ರೆ ಸಹಕರಿಸಿ, ಇಲ್ಲವಾದ್ರೆ ನಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸಿ, ನಾವು ಎಲ್ಲದಕ್ಕೂ ಸಿದ್ದರಾಗೇ ಬಂದಿದ್ದೇವೆ ಎಂದು ಜಿ.ವಿ.ಶ್ರೀರಾಮರೆಡ್ಡಿಯವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರ ಮನವಿ ಆಲಿಸಿದ ಜಿಲ್ಲಾಧಿಕಾರಿ ಅನ್ವರ‍್ ಪಾಷರವರು ಜನವರಿ 23 ರಂದು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ನಿಮ್ಮ ಸ್ಥಳೀಯ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸುತ್ತೇನೆ. ರಾಜ್ಯಮಟ್ಟದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡುತ್ತಾ ಇಲ್ಲಿಗೆ ಪ್ರತಿಭಟನೆ ನಿಲ್ಲಿಸಿ ಎಂದು ಮನವಿ ಮಾಡಿದರು. ಅದಕ್ಕೆ ಬಗ್ಗದ ಜನರು ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ. ಚಿಕ್ಕ ಸಭೆ ಕರೀರಿ, ಮಾತಿಗೆ ತಪ್ಪಿದ್ರೆ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಹಿಳೆಯರ ಮೈ ಮುಟ್ಟಿದರೆ ಚೆನ್ನಾಗಿರುವುದಿಲ್ಲ

ಪರಿಸ್ಥಿತಿ ಕೈಮೀರುತ್ತಿದೆ ಎಂದು ಭಾವಿಸಿ ಪೊಲೀಸರು ಮಹಿಳೆಯರು ಸೇರಿದಂತೆ ಕೆಲ ಜನರನ್ನು ಬಂಧಿಸಲು ಮುಂದಾದರು. ಆದರೆ ``ಪುರುಷ ಪೇದೆಗಳು ನಮ್ಮ ಮೈಮುಟ್ಟಿದರೆ ಚೆನ್ನಾಗಿರುವುದಿಲ್ಲ. ಮಹಿಳಾ ಪೇದೆಗಳೇ ಬಂದು ನಮ್ಮನ್ನು ಬಂಧಿಸಲಿ. ನಿಮ್ಮ ವಾಹನಗಳಲ್ಲಿ ಕುರಿಗಳನ್ನು ತುಂಬಿಕೊಂಡು ಹೋದಂತೆ ಹೋದರೆ ನಾವು ಬರುವುದಿಲ್ಲ. ಬೇರೆ ಬಸ್ಗಳನ್ನು ಕರೆಸಿ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಇದರಿಂದ ಪಿಕಲಾಟಕ್ಕೆ ಸಿಲುಕಿದ ಪೊಲೀಸರು ಕೊನೆಗೆ ಮಹಿಳಾ ಪೇದೆಗಳನ್ನು ಹಾಗೂ ಖಾಸಗಿ ಬಸ್ಗಳನ್ನು ಕರೆಸಿ ಎಲ್ಲರನ್ನು ಬಂಧಿಸಿದರು.

ಪ್ರತಿಭಟನೆಗೆ ಮಣಿದು ಸಭೆ ಕರೆದ ಜಿಲ್ಲಾಧಿಕಾರಿ

ಸಭೆಯಲ್ಲಿ ರೇಷನ್ ಜೊತೆಗೆ ರೇಗಾ, ಐ.ಸಿ.ಡಿ.ಎಸ್ ಬಿಸಿಯೂಟ, ಹಾಸ್ಟೆಲ್ ಊಟ, ಎಸ್ಹೆಚ್ಜಿ ಸಬಲೀಕರಣ ರೈತ ಕಾರ್ಮಿಕ ಹಾಗೂ ಮಹಿಳೆಯರ ಪ್ರಶ್ನೆಗಳ ಚರ್ಚೆ, ಪಡಿತರ ಅವ್ಯವಸ್ಥೆಯನ್ನು ಸರಿಪಡಿಸಲು ಎರಡು ತಿಂಗಳ ಕಾಲಾವಕಾಶ ಕೋರಿದ ಜಿಲ್ಲಾಡಳಿತ ಜನವರಿ 23 ರಂದು ಸುಮಾರು 300 ಸಾವಿರಕ್ಕೂ ಹೆಚ್ಚಿದ್ದ ನಾವು ಜಿಲ್ಲಾಧಿಕಾರಿ ಕಛೇರಿಗೆ ನುಗ್ಗಲು ಯತ್ನಿಸುತ್ತಿದ್ದಾಗಲೇ, ವಿವಿಧ ಅಧಿಕಾರಿಗಳೊಟ್ಟಿಗೆ ಸಭೆಗೆ ಸಿದ್ದವಿದೆ ಬನ್ನಿ ಎಂದು ಮುಖಂಡರನ್ನು ಆಹ್ವಾನಿಸಿದರು. ಮಾನ್ಯ ಜಿಲ್ಲಾಧಿಕಾರಿಯವರು ಅಧ್ಯಕ್ಷತೆ ವಹಿಸಿಕೊಂಡು ಮೊದಲಿಗೆ ನಮ್ಮನ್ನಗಲಿದ ಸಂಗಾತಿ ಜ್ಯೋತಿಬಸುರವರಿಗೆ ಸಲ್ಲಿಸಲಾಯಿತು.

ಅತಿ ಮುಖ್ಯವಾಗಿ ಜನತೆಯನ್ನು ಕಾಡುತ್ತಿರುವ ಅಸಮರ್ಪಕ ರೇಷನ್ ಕಾರ್ಡು ಮತ್ತು ರೇಷನ್ ವಿತರಣೆ ಅದರಲ್ಲಿನ ಅಕ್ರಮಗಳು ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಅವಕಾಶ ಮಾಡಿತು.
1) ಜಿ.ವಿ.ಶ್ರೀರಾಮರೆಡ್ಡಿಯವರು ಮತ್ತು ನಾವು ಪ್ರತಿ  ರೇಷನ್ ಕಾರ್ಡಿನಲ್ಲಿ ನಮೂದಾಗಿರುವ ಹಾಗೆಯೇ ಬೆಳಿಗ್ಗೆ 8 ರಿಂದ 12, ಸಂಜೆ 4 ರಿಂದ 8 ರವರೆಗೆ ಕಡ್ಡಾಯವಾಗಿ ರೇಷನ್ ಅಂಗಡಿ ತೆರೆಯುವಂತೆ ಕ್ರಮ ವಹಿಸಬೇಕೆಂದು ಪ್ರಶ್ನೆ ಮಾಡಿದಾಗ ಎಲ್ಲರೂ ಬಾಗಿಲು ತೆರೆದು ರೇಷನ್ ಯಾವಾಗಲೂ ವಿತರಿಸುತ್ತಾರೆಂದು ಸುಳ್ಳು ಹೇಳಿ ಕಳ್ಳರ ಪರ ಸಮರ್ಥನೆ ಮಾಡಿಕೊಳ್ಳಲು ಮುಂದಾದ ಆಹಾರ ನಿರೀಕ್ಷಕ ಶಶಿಧರ ಅವರು ತೀವ್ರ ಚರ್ಚೆಗೆ ಒಳಗಾಗಿ ಸಭೆಯಲ್ಲಿ ಕಕ್ಕಾಬಿಕ್ಕಿಯಾದರು.

2. ಪ್ರತಿ ರೇಷನ್ ಮತ್ತು ಸೀಮೆ ಎಣ್ಣೆ ವಿತರಣೆ ಅಂಗಡಿ ಮುಂದೆ ಪಡಿತರ ದರ ಮತ್ತು ರೇಷನ್ ವಿವರ ಹಾಗೂ ತಿಂಗಳ ವಿತರಣೆ ಮತ್ತು ಸ್ಟಾಕ್ ಮಾಹಿತಿಯನ್ನು ನೊಟೀಸ್ ಬೋರ್ಡಿನಲ್ಲಿ ಕಡ್ಡಾಯವಾಗಿ ಹಾಕಲೇಬೇಕು ಎನ್ನುವ ಪ್ರಶ್ನೆ ಮುಂದಿಟ್ಟಾಗ ಪಡಿತರ ವಿತರಣೆ ಸರಿಯಾಗಿ ಆಗುವ ನಿಟ್ಟಿನಲ್ಲಿ ರೇಷನ್ ಅಂಗಡಿ ಮುಂದೆ ನೋಟೀಸ್ ಬೋರ್ಡು ಹಾಕಿಸುತ್ತೇವೆ. ನೀವು ಕೇಳುವ ಪ್ರಶ್ನೆಗಳು ನ್ಯಾಯಯುತವಾಗಿದ್ದು ಅದನ್ನು ನಾವು ಪ್ರಾಮಾಣಿಕವಾಗಿ ಪ್ರಯತ್ನಿಸಿ, ರೇಷನ್ ವಿತರಣೆಯಲ್ಲಿನ ಲೋಪ ಸರಿಪಡಿಸಿ ನಿಗದಿತ ದರಕ್ಕಿಂತ ಹೆಚ್ಚು ಹಣ ಸುಲಿಗೆ ಮಾಡಿ ರಶೀಧಿ ನೀಡದ ಪಡಿತರ ವಿತರಕರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನೆಮ್ಮದಿ ಕೇಂದ್ರದ ಕಾರ್ಡುಗಳಿಗೂ ಅಕ್ಕಿ ವಿತರಿಸುತ್ತೇವೆ. ಆಹಾರ ಭದ್ರತಾ ಸಮಿತಿ, ರೇಷನ್ ಅಂಗಡಿವಾರು ಜಾಗೃತ ಸಮಿತಿ ಎಚ್ಚೆತ್ತು ಕೆಲಸ ನಿರ್ವಹಿಸುವಂತೆ ಹಾಗೂ ಪಡಿತರದಾರರೊಟ್ಟಿಗೆ ವಿತರಕರು, ಗೌರವಯುತವಾಗಿ ನಡೆದುಕೊಳ್ಳುವಂತೆ, ಹಾಗೂ ರೇಷನ್ ಕಾರ್ಡು ಸಂಬಂಧ ಕಾರ್ಡು ಕಡಿತ ಆಗಲಿ, ರೇಷನ್ ಕಾರ್ಡು ಅರ್ಜಿ ಪಡೆಯುವುದಾಗಲಿ ಗ್ರಾಮದ ಬಹುತೇಕ ಜನತೆ ಇರುವಾಗ ಟಾಮ್ಟಾಮ್ ಹೊಡೆದು ಗ್ರಾಮಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕೆನ್ನುವ ರೀತಿ ಕ್ರಮ ಕೈಗೊಳ್ಳುತ್ತೇವೆನ್ನುವ ಮೂಲಕ ರೇಷನ್ ವಿತರಣಾ ನಿಯಮಾವಳಿಗಳನ್ನು ಗಾಳಿಗೆ ಬಿಡದೆ ಪಾಲಿಸುತ್ತೇವೆಂದರು.

ಫೋಟೋ ಕಡ್ಡಾಯ ಮಾಡದೇ ಕುಟುಂಬದ ಎಲ್ಲಾ ಸದಸ್ಯರಿಗೂ ರೇಷನ್ ವಿತರಣೆ ಮಾಡಬೇಕು ಮತ್ತು 12 ವರ್ಷದೊಳಗಿನ ಮಕ್ಕಳಿಗೂ ರೇಷನ್ ನೀಡಬೇಕೆಂಬ ಬೇಡಿಕೆಯನ್ನು ಸಭೆಯ ಮುಂದೆ ಇಟ್ಟಾಗ, ಜಿಲ್ಲಾಧಿಕಾರಿಗಳು, ಸಹಾಯಕ ಜಿಲ್ಲಾಧಿಕಾರಿಗಳು ಹಾಗೂ ಸಿ.ಇ.ಒ ಬರೇ ಶೇ.45 ಮಾತ್ರ ಫುಡ್ ಅಲೌಟ್ಮೆಂಟ್ ಆಗುತ್ತೆ ಎಂದು ಸಭೆಗೆ ಸುಳ್ಳು ಮಾಹಿತಿ ನೀಡುತ್ತಿದ್ದ ಆಹಾರ ನಿರೀಕ್ಷಕರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಶೇ.80 ರೇಷನ್ ಅಲಾಟ್ಮೆಂಟ್ ಆಗುತ್ತಿದೆ. ಜೊತೆಗೆ 12 ವರ್ಷದೊಳಗಿನ ಮಕ್ಕಳಿಗೂ ಫುಡ್ ಅಲಟ್ ಆಗುತ್ತೆ. ಅದನ್ನು ತಕ್ಷಣ ಪಡಿತರದಾರರಿಗೆ ಸರಿಯಾದ ರೀತಿಯಲ್ಲಿ ವಿತರಿಸಬೇಕೆಂದು ಸೂಚನೆ ನೀಡಿದರು.

ಪಡಿತರದಾರ ಫೋಟೋ ತೆಗೆಯಲು ವಿಳಂಬ ಮಾಡುತ್ತಿರುವ ಟೊಮ್ಯಾಕೋ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ರೇಷನ್ ಸಿಗದೆ ಜನತೆ ಹಸಿವಿನಿಂದ ಪರದಾಡುವಂತಾಗಿದೆ. ತಕ್ಷಣ ಮನೆಮನೆಗೆ ತೆರಳಿ ಫೋಟೋ ತೆಗೆಯಬೇಕೆಂದು ತಾಕೀತು ಮಾಡಿದರು.  ಪಡಿತರ ವಿತರಣೆಯಲ್ಲಿ ವಿಪರೀತ ಲೋಪದೋಷವಿದ್ದು ಅಲಾಟ್ಮೆಂಟ್  ಆದ ಅಕ್ಕಿ, ಗೋಧಿ, ಸಕ್ಕರೆ, ಸೀಮೆ ಎಣ್ಣೆ ನಗರದಲ್ಲೇ ಖಾಲಿ ಆಗಿ ಅರ್ಧ ಲೋಡ್ ಮಾತ್ರವೇ ರೇಷನ್ ಅಂಗಡಿ ಸೇರೋದು, ಫುಡ್ಗಾಗಿ ಎಫ್.ಡಿ. ಕಟ್ಟುವ ಏಜೆಂಟ್ಗಳಿಗೆ ಯಾವುದೇ ಕಡಿವಾಣವಿಲ್ಲ. ಜಿಲ್ಲಾಡಳಿತದ ನಿಷ್ಕ್ರೀಯತೆಯಿಂದ ಆಹಾರ ಸೌಲತ್ತಿನಿಂದ ಬಡಜನತೆ ವಂಚಿತರಾಗುತ್ತಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡು ಆಹಾರ ವಿತರಿಸಬೇಕೆಂದು ಹಾಗೂ ಜಿಲ್ಲಾದ್ಯಂತ ಅಡುಗೆ ಅನಿಲದ ಅಸಮರ್ಪಕ ವಿತರಣೆ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕಳ್ಳತನದ ಮಾರಾಟಕ್ಕೆ ಕಡಿವಾಣ ಹಾಕಿ ಅಂತಹ ಏಜೆನ್ಸಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಂತಹ ಏಜೆನ್ಸಿಯನ್ನು ರದ್ದು ಮಾಡಬೇಕೆಂದು ಸಭೆಯು ಪಟ್ಟು ಹಿಡಿದಾಗ ನಿಮ್ಮ ಬೇಡಿಕೆಗಳನ್ನು ನಾವು ಒಪ್ಪುತ್ತೇವೆ. ಈ ಎಲ್ಲಾ ಸಮಸ್ಯೆಗಳು ಇರುವುದು ನಿಜ. ಜಿಲ್ಲೆಯ 271538 ರೇಷನ್ ಕಾರ್ಡಿನಲ್ಲಿ ಇನ್ನು 31538 ಜನ ಫೋಟೋದಿಂದ ವಂಚಿತರಾಗಿದ್ದಾರೆ. ಅದನ್ನು ಸರಿಪಡಿಸಲು ಹಾಗೂ ಮೇಲಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಎರಡು ತಿಂಗಳ ಕಾಲಾವಕಾಶ ಕೊಡಿ ಎಂದು ಜಿಲ್ಲಾಡಳಿತ ಮನವಿ ಮಾಡಿತು. ಸಭೆಯಲ್ಲಿದ್ದ ಎಲ್ಲ ಸಂಘಟನಾ ಮುಖಂಡರು ಸಮ್ಮತಿಸಿದೆವು.

 

- ಸಿ. ಕುಮಾರಿ

ಸೌಜನ್ಯ: ಜನಶಕ್ತಿ 


Share: