ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಸ್ಥಳೀಯರ ವಿರೋಧದ ಹೊರತಾಗಿಯೂ ಕಾರ್ಯನಿರ್ವಹಿಸುತ್ತಿರುವ ಹಂದಿ ಸಾಕಾಣಿಕಾ ಕೇಂದ್ರ

ಭಟ್ಕಳ: ಸ್ಥಳೀಯರ ವಿರೋಧದ ಹೊರತಾಗಿಯೂ ಕಾರ್ಯನಿರ್ವಹಿಸುತ್ತಿರುವ ಹಂದಿ ಸಾಕಾಣಿಕಾ ಕೇಂದ್ರ

Sat, 31 Oct 2009 18:33:00  Office Staff   S.O. News Service
ಭಟ್ಕಳ, ಅಕ್ಟೋಬರ್ 31 : ತಾಲೂಕಿನ ಕೊಪ್ಪ ಪಂಚಾಯತ ಪಂಚಾಯತ ವ್ಯಾಪ್ತಿಯಲ್ಲಿರುವ ಹಂದಿ ಸಾಗಾಣಿಕಾ ಕೇಂದ್ರವು ಸ್ಥಳೀಯರ ವಿರೋಧದ ಹೊರತಾಗಿಯೂ ಚಲಾವಣೆಯಲ್ಲಿರುವ ಬಗ್ಗೆ ತಾಲೂಕು ಪಂಚಾಯತ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಆಕ್ರೋಶ ವ್ಯಕ್ತವಾಗಿದೆ.
30vd2.jpg
ಈ ಕುರಿತು ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯರು, ಸಾಗಾಣಿಕಾ ಕೇಂದ್ರದ ಸುತ್ತಮುತ್ತಲಿನ ಪರಿಸರ ಹದಗೆಟ್ಟು ಹೋಗಿದೆ. ಇದರಲ್ಲಿಯೇ ಆಹಾರವನ್ನು ಕಂಡುಕೊಳ್ಳುತ್ತಿರುವ ಹದ್ದು, ಕಾಗೆಗಳು ಸಾವಿಗೀಡಾಗುತ್ತಿವೆ. ಬಾವಿಯ ನೀರಿನಲ್ಲಿಯೂ ಕಲ್ಮಷ ಸೇರಿಕೊಂಡ ಕಾರಣ ವಿದ್ಯಾರ್ಥಿಗಳೂ ಬಿಸಿಯೂಟದಲ್ಲಿ ಪಾಲ್ಗೊಳ್ಳಲು ಹೇಸಿಗೆಪಟ್ಟುಕೊಳ್ಳುತ್ತಿದ್ದಾರೆ. ಸಾಗಾಣಿಕಾ ಕೇಂದ್ರಕ್ಕೆ ಆರೋಗ್ಯ ಇಲಾಖೆ ಅನುಮತಿಯನ್ನೇ ನೀಡಿಲ್ಲ. ಕೇವಲ ಗ್ರಾಮ ಪಂಚಾಯತ ಅನುಮೋದನೆಯ ಕಾರಣ ಕೇಂದ್ರವು ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ವಿದ್ಯುತ್ ಸಂಪರ್ಕದ ಬಗ್ಗೆಯೂ ತನಿಖೆ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸದಸ್ಯರು ಪ್ರತಿಪಾದಿಸಿದರು.
 
ಇದಕ್ಕುತ್ತರಿಸಿದ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ಸ್ಥಳೀಯವಾಗಿ ಸಭೆ ಕರೆದು ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ನೀಡಿದರು. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ನಿರ್ಲಕ್ಷ್ಯ ಮುಂದುವರೆದಿರುವ ಬಗ್ಗೆಯೂ ಸಭೆ ಖಂಡನಾ ನಿರ್ಣಯವನ್ನು ಅಂಗೀಕರಿಸಿದ್ದು, ಇದಕ್ಕೆ ಕಾರಣರಾಗಿರುವ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯತ ಉಪಾಧ್ಯಕ್ಷ ಮಾದೇವ ನಾಯ್ಕ ಆಗ್ರಹಿಸಿದರು. ಈ ವಿಷಯದ ಕುರಿತಂತೆ ಸಭೆಯಲ್ಲಿ ಚರ್ಚಿಸಿ ಸಾಕಾಗಿದೆ. ಪರಿಣಾಮ ಶೂನ್ಯ ಎಂದು ಸದಸ್ಯ ಜಗದೀಶ ಜೈನ್ ವ್ಯಂಗ್ಯವಾಡಿದರು. ಹಲವಾರು ವರ್ಷಗಳಿಂದ ಭಟ್ಕಳದಲ್ಲಿಯೇ ಬೇರುಬಿಟ್ಟಿರುವ ಕೆಲವು ನರ್ಸಗಳು ವೈದ್ಯರಿಗೂ ಗೌರವವನ್ನು ನೀಡುತ್ತಿಲ್ಲ. ಅವರನ್ನು ಇಲ್ಲಿಂದ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಬರೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
 
ಜಲಾನಯನ ಇಲಾಖೆಯಲ್ಲಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನೇ ನೀಡುತ್ತಿಲ್ಲ. ಪ್ರತಿ ಸಭೆಗೆ ಹೊಸಬರು ಬಂದು ಹೋಗುತ್ತಿದ್ದು, ಸರಿಯಾದ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಕಾಮಗಾರಿಗಳ ಒಟ್ಟೂ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸುವಂತೆ ಸದಸ್ಯ ಪರಮೇಶ್ವರ ದೇವಾಡಿಗ ಒತ್ತಾಯಿಸಿದರು. ಬೆಳೆ ಇಳುವರಿ ನಿಗದಿಯ ಮಾನದಂಡದ ಕುರಿತಂತೆಯೂ ಹಲವಾರು ಪ್ರಶ್ನೆಗಳು ತೇಲಿ ಬಂದವು. ತಾಲೂಕು ಪಂಚಾಯತ ಅಧ್ಯಕ್ಷೆ ಗೌರಿ ಮೊಗೇರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ತಹಸೀಲ್ದಾರ ಎಸ್.ಎಮ್.ನಾಯ್ಕ, ತಾಲೂಕು ಪಂಚಾಯತ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಿಂಧೂ ಭಾಸ್ಕರ ನಾಯ್ಕ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಎಮ್.ಎಮ್.ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ವ್ಯವಸ್ಥಾಪಕ ವಿನೋದ ಗಾಂವಕರ್ ವಂದಿಸಿದರು.


Share: