ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನವದೆಹಲಿ: ರೆಡ್ಡಿ ಸಹೋದರರ ಬಿಗಿಪಟ್ಟು - ಇರಿಸುಮುರುಸಿನಲ್ಲಿ ಬಿಜೆಪಿ ನಾಯಕರು

ನವದೆಹಲಿ: ರೆಡ್ಡಿ ಸಹೋದರರ ಬಿಗಿಪಟ್ಟು - ಇರಿಸುಮುರುಸಿನಲ್ಲಿ ಬಿಜೆಪಿ ನಾಯಕರು

Thu, 05 Nov 2009 02:53:00  Office Staff   S.O. News Service
ನವದೆಹಲಿ, ನವೆಂಬರ್ ೪: ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ನೇರ ಮಾತುಕತೆಗೂ ‘ರೆಡಿಯಿಲ್ಲ’ ಎನ್ನುವಷ್ಟರ ಮಟ್ಟಿಗೆ ರೆಡ್ಡಿ ಸೋದರರು ಕಬ್ಬಿಣದ ಕಾಠಿಣ್ಯ ಧರಿಸಿದ್ದಾರೆ. 
ದಿಲ್ಲಿಯ ರಾಜಕೀಯ ವಲಯಗಳ ಬಹಿರಂಗ ಬಿಸಿ ಚರ್ಚೆಗೆ ಗ್ರಾಸವಾಗಿರುವ ರಾಜ್ಯ ಬಿಜೆಪಿ ಸರ್ಕಾರದ ಆಂತ ರಿಕ ಬಿಕ್ಕಟ್ಟು ಬುಧವಾರವೂ ಪರಿಹಾರ ಕಾಣಲಿಲ್ಲ. ಆಂತರಿಕ ಕಲಹ, ಸೋಲಿನ ಸರಣಿಯಿಂದ ಜರ್ಝ ರಿತ ಆಗಿರುವ ವರಿಷ್ಠ ಮಂಡಳಿ ರಾಜ್ಯಮಟ್ಟದಲ್ಲಿ ಭುಗಿಲೆದ್ದಿರುವ ಭಿನ್ನಮತದ ಬೆಂಕಿ ನಂದಿಸುವಲ್ಲಿ ಈವರೆಗೆ ಯಶಸ್ಸು ಕಂಡಿಲ್ಲ. 
ನಾಯಕತ್ವ ಬದಲಾವಣೆ ಇಲ್ಲ ಎಂಬ ನಿಲವು ತಳೆದಿದ್ದ ವರಿಷ್ಠ ವರ್ಗವನ್ನು ರೆಡ್ಡಿ ಸೋದರರ ಧಾರ್ಷ್ಟ್ಯ ಮೊದಲ ಬಾರಿಗೆ ಧೃತಿಗೆಡಿಸಿರುವ ತೆಳು ಸೂಚನೆಗಳು ತಲೆದೋರಿವೆ. ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪ ನಾಯಕತ್ವವೂ ಬೇಕು...ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರವೂ ಉಳಿಯಬೇಕು. 
 
ವರಿಷ್ಠ ಮಂಡಳಿಯ ದೌರ್ಬಲ್ಯದ ಮೂಲ ಈ ಎರಡು ವಿರೋಧಾಭಾಸಗಳ ನಡುವೆ ಅಡಗಿದಂತಿದೆ. ನಾಯಕತ್ವ ಬದಲಾವಣೆ ಇಲ್ಲ ಎಂದು ಈವರೆಗೆ ಬೆನ್ನಿಗೆ ನಿಂತಿರುವ ವರಿಷ್ಠರ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ರಾತ್ರಿ ವಿಶೇಷ ವಿಮಾನದಲ್ಲಿ ದಿಲ್ಲಿಗೆ ಬಂದಿಳಿದರು. 
ಮತ್ತೆ ಜನಾರ್ದನರೆಡ್ಡಿ-ಸುಷ್ಮಾ ಮಾತುಕತೆ:ಮಂಗಳವಾರ ಮೂರು ಭೇಟಿಗಳ ನಂತರ ಬುಧವಾರ ಅಪರಾಹ್ಣ ಮೂರೂವರೆಯಿಂದ ಸುಮಾರು ಒಂದೂವರೆ ತಾಸು ‘ತಾಯಿ ಸುಷ್ಮಾ ಸ್ವರಾಜ್’ ಜೊತೆ ಮಾತುಕತೆ ನಡೆಸಿದರು ಸಚಿವ ಜನಾರ್ದನರೆಡ್ಡಿ. 
 
ಕಣ್ಣಿಟ್ಟ ಮಿಗವನ್ನು ಬೇಟೆಯಾಡಿ ಕೆಡವಿಯೇ ಸಿದ್ಧ ಎಂಬ ನಿರ್ದಯೀ ನಿರ್ಧಾರ ಅವರ ಆಕ್ರಮಣಶೀಲ ಆಂಗಿಕ ಭಾಷೆಯಲ್ಲಿ, ತಣ್ಣನೆಯ ಉಕ್ಕಿನ ದನಿಯಲ್ಲಿ, ಚೂರಿಯಂತಹ ಕಣ್ಣೋಟದಲ್ಲಿ ನಿಚ್ಚಳವಾಗಿ ಒಡಮೂಡಿತ್ತು. 
 
ಸಂಜೆ ಐದೂಕಾಲರ ಹೊತ್ತಿಗೆ ದೇವೇಗೌಡರ ಮನೆಯಿಂದ ಕೂಗಳತೆಯ ದೂರದಲ್ಲಿರುವ ಸುಷ್ಮಾ ಸ್ವರಾಜ್ ಅವರ ಸರ್ಕಾರಿ ಬಂಗಲೆಯ ಗೇಟಿನ ಹೊರಕ್ಕೆ ತೇಲಿತು ಅವರ ಕೆನೆಬಿಳುಪಿನ ಐಷಾರಾಮೀ ಕಾರು. 
 
ಹಿಂದಿನ ಸೀಟುಗಳಲ್ಲಿ ಸಚಿವ ಶ್ರೀರಾಮುಲು ಅವರ ಸೋದರ ಸಂಸದ ಸಣ್ಣಫಕೀರಪ್ಪ ಮತ್ತು ಸೋದರಿ ಬಳ್ಳಾರಿ ಸಂಸದೆ ಶಾಂತಾ ಹಾಗೂ ಬಳಗದ ಇತರ ಶಾಸಕರು. 
ಸಿನೆಮಾ ನಟನ ಠಾಕು ಠೀಕಿನ ಪೋಷಾಕಿನಲ್ಲಿದ್ದ ಸಚಿವ ರೆಡ್ಡಿ ತಮ್ಮ ದನಿಯಲ್ಲಿ ಎಂದಿನಂತೆ ಹೇರುಗಟ್ಟಲೆ ಛಲ ತುಂಬಿ ತುಳುಕಿತ್ತು. 
ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್‌ಸಿಂಗ್ ಹೇಳಿದ್ದಾರಲ್ಲ ಎಂಬ ಪ್ರಶ್ನೆ ಕೇಳಿದ ಸುದ್ದಿಗಾರನತ್ತ ತಿರುಗಿದ ಗಣಿಧಣಿ ಸಿಡಿಸಿದ ಬಿರುಸಿನ ಪ್ರತಿಪ್ರಶ್ನೆ: 
ಬದಲಾವಣೆ ಇಲ್ಲ ಅಂತ ನಿಮಗೆ ಹೇಳಿದರಾ ರಾಜನಾಥ್‌ಸಿಂಗ್? 
‘ಹೌದು’ ಎಂಬ ಸುದ್ದಿಗಾರನ ಸೋಲೊಪ್ಪದ ಉತ್ತರವನ್ನು ಅಸೀಮ ನಿರ್ಲಕ್ಷ್ಯದಿಂದ ಒರೆಸಿ ಪಕ್ಕಕ್ಕೆ ಒಗೆದ ರೆಡ್ಡಿ. ದುರ್ದಾನ ಪಡೆದವರಂತೆ ಹಠಾತ್ತನೆ ‘ನಾನು ಹೇಳುವುದು ಇನ್ನೇನೂ ಇಲ್ಲ’ ಎಂದು ಚಿಪ್ಪಿನೊಳಕ್ಕೆ ಮುದುರಿಕೊಳ್ಳಲು ಮುಂದಾದರು. 
ಆದರೆ ಸುದ್ದಿಗಾರರ ಸೇನೆ ಅವರ ಕೆನೆಬಣ್ಣದ ಹಡಗಿನಂತಹ ಕಾರನ್ನು ತರುಬಿ ಹಿಡಿದಿತ್ತಲ್ಲ. ಅರ್ಧ ದೇಹವನ್ನು ಕಾರಿನೊಳಗೆ ತೂರಿಸಿ ಇನ್ನರ್ಧವನ್ನು ಹೊರಕ್ಕೆ ಚಾಚಿದ್ದ ಅವರು ಸಲೀಸಾಗಿ ‘ಪಾರಾಗುವುದು’ ಸಾಧ್ಯವಿರಲಿಲ್ಲ. 
ಹೀಗಾಗಿ ಮೆಲುದನಿಯ ಇಂಗ್ಲಿಷಿನಲ್ಲಿ ಮುಂದುವರೆಸಿದರು: 
ವರಿಷ್ಠರು ಕರ್ನಾಟಕ ರಾಜ್ಯ ಮತ್ತು ಭಾರತೀಯ ಜನತಾಪಾರ್ಟಿಯ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ನಮಗಿದೆ. 
ಪ್ರವಾಹದ ಹಾವಳಿಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಐವತ್ತನಾಲ್ಕು ಸಾವಿರ ಮನೆಗಳನ್ನು ಕಟ್ಟಲು ನಾವು ಹೊರಟೆವು. ಮುಖ್ಯಮಂತ್ರಿ ಅಡಚಣೆ ಒಡ್ಡಿದರು. ನಮ್ಮ ಪಾಡಿಗೆ ನಮ್ಮ ಕೆಲಸವನ್ನು ಮಾಡಲು ಅವರು ಬಿಡಲಿಲ್ಲ. ಜನತೆ ಕೂಡ ಮುಖ್ಯಮಂತ್ರಿ ವಿರುದ್ಧ ಬಹಳ ರೊಚ್ಚಿಗೆದ್ದಿದ್ದಾರೆ. ಮನೆ ಕಟ್ಟಲು ಅಭಿವೃದ್ಧಿ ಕೆಲಸ ಮಾಡಲು ಬಾಧಕರಾಗಿದ್ದಾರೆ ಮುಖ್ಯಮಂತ್ರಿ. 
ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಲ್ಲಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಕೆಲಸ ಮಾಡಿದ ಅಧಿಕಾರಿಗಳನ್ನು ತೆಗೆದು ಹಾಕಿದ್ದಾರೆ. ಕಂದಾಯ ಮತ್ತು ಆರೋಗ್ಯ ಮಂತ್ರಾಲಯಗಳ ಕೆಲಸದಲ್ಲಿ ಬಹಳ ಹಸ್ತಕ್ಷೇಪ ಮಾಡುತ್ತಿದ್ದಾರೆ. 
 
ಆ ಹಂತದಲ್ಲಿ ತಲೆ ಎಣಿಕೆಯ ಬೇಡಿಕೆ ಇಟ್ಟಿದ್ದೀರಾ ಎಂಬ ಪ್ರಶ್ನೆ ತೂರಿ ಬಂದ ತಕ್ಷಣ ಕಾರಿನೊಳಗೆ ಕುಳಿತರು ರೆಡ್ಡಿ. ಸೂಕ್ಷ್ಮ ಅರಿತ ಬಳ್ಳಾರಿ ಸಂಸದೆ ಜೆ.ಶಾಂತಾ ಮತ್ತು ಆಕೆಯ ಒಡಹುಟ್ಟಿದ ಸೋದರ ರಾಯಚೂರು ಸಂಸದ ಸಣ್ಣ ಫಕೀರಪ್ಪ ಕೂಡ ಕಾರಿನೊಳಕ್ಕೆ ತೂರಿಕೂಂಡು ಕುಳಿತರು. 
 
ಕನ್ನಡದಲ್ಲಿ:ಮುಂದೆ ಚಲಿಸಿದ ಕಾರಿನ ಹಿಂದೆ ಹಿಂದೆ ‘ಕನ್ನಡ ಬೈಟ್ ಕೊಡೀ ಸಾರ್’ ಎಂದು ಕನ್ನಡ ಟೀವಿ ಚಾನೆಲ್‌ಗಳ ವರದಿಗಾರರು- ಕ್ಯಾಮೆರಾಮನ್‌ಗಳ ಧಾವಂತ. ರೆಡ್ಡಿ ಅವರ ಔದಾರ್ಯ ದೊಡ್ಡದು. ಮುಂದಕ್ಕೆ ತೇಲಿದ್ದ ಕಾರು ಮತ್ತೆ ನಿಂತಿತು. ಕನ್ನಡದಲ್ಲಿಯೂ ರೆಡ್ಡಿ ಹೇಳಿದರು: 
 
ನಮ್ಮ ಸ್ನೇಹಿತರಾದ ಎಲ್ಲ ಗಣಿ ಮಾಲೀಕರ ಜೊತೆ ಮಾತನಾಡಿ ಪ್ರವಾಹ ಸಂತ್ರಸ್ತರಿಗೆ ನಾವೆಲ್ಲ ಸೇರಿ 54 ಸಾವಿರ ಮನೆಗಳನ್ನು ಕಟ್ಟಿಸಿಕೊಡಲು ಮುಂದಾದೆವು. ಆದರೆ ಅದಕ್ಕೆ ಹಲವು ಆತಂಕ- ತೊಂದರೆಗಳನ್ನು ನೀಡಿದರು. 
 
ನನ್ನ ಅಣ್ಣ ಕಂದಾಯ ಸಚಿವ ಕರುಣಾಕರರೆಡ್ಡಿ ಅವರ ಇಲಾಖೆಯಲ್ಲಿ ಅತಿಯಾದ ಹಸ್ತಕ್ಷೇಪ ನಡೆಯಿತು. ಕೆಲಸಗಳೇ ಆಗದೆ ಇರುವಂತೆ ಅಡ್ಡಿ ಮಾಡುವ ವ್ಯಕ್ತಿಗಳು ಇದ್ದಾರೆ. 
ಸಾರ್, ಯಡಿಯೂರಪ್ಪ ದಿಲ್ಲಿಗೆ ಬರ್ತಿದ್ದಾರೆ...ಅವರ ಜೊತೆ ಮುಖಾಮುಖಿ ಮಾತುಕತೆಗೆ ತಯಾರಿದ್ದೀರಾ? 
ನೋಡಿ....ಅದರ ಅಗತ್ಯ ಇಲ್ಲ... ನಮ್ಮ ಎಲ್ಲ ಅನಿಸಿಕೆ ಅಭಿಪ್ರಾಯಗಳನ್ನು ನಾವು ವರಿಷ್ಠರಿಗೆ ವಿವರವಾಗಿ ತಿಳಿಸಿಬಿಟ್ಟಿದ್ದೇವೆ. 
ಹೆಚ್ಚಿನ ಪ್ರಶ್ನೆಗಳಿಗೆ ಅವಕಾಶ ಇಲ್ಲ ಎಂಬಂತೆ ಕಾರು ಮುಂದೆ ಸರಿದು ಹೋಯಿತು.

ಸೌಜನ್ಯ: ಕನ್ನಡಪ್ರಭ


Share: