ಕಾರವಾರ : ಇತ್ತೀಚಿಗಷ್ಟೆ ಪ್ರವಾಹದಲ್ಲಿ ತೆರಳಿ ವಿದ್ಯುತ್ ದುರಸ್ತಿ ಕಾರ್ಯ ಮಾಡಿದ್ದ ಹೆಸ್ಕಾಂ ಸಿಬ್ಬಂದಿಗಳು ಮೊಸಳೆಗಳ ಹಾವಳಿ ಹೆಚ್ಚಿರುವ ಕಾಳಿ ನದಿಯ ನಡುಗಡ್ಡೆಯೊಂದಕ್ಕೆ ತೆರಳಿ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಕತ್ತಲೆಯಲ್ಲಿದ್ದ ಗ್ರಾಮಕ್ಕೆ ಬೆಳಕು ನೀಡಿ ಮೆಚ್ಚುಗೆ ಪಡೆದಿದದ್ದಾರೆ.
ಕಾಳಿ ನದಿಯ ನಡುಗಡ್ಡೆ ಪ್ರದೇಶದ ವ್ಯಾಪ್ತಿಯಲ್ಲಿರುವ ಕುಳಗಿ- ಬೊಮ್ಮನಹಳ್ಳಿ ಗ್ರಾಮಗಳಿಗೆ ವಿದ್ಯುತ್ ಪೂರೈಸುವ 11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಮರದ ಟೊಂಗೆ ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದು ಮೊಸಳೆಗಳ ವಾಸ ಸ್ಥಾನವಾಗಿದೆ. ನೂರಾರು ಮೊಸಳೆಗಳು ಇಲ್ಲಿ ಬೀಡು ಬಿಟ್ಟಿವೆ. ಇಂತಹ ಪ್ರದೇಶದಲ್ಲಿ ತೆರಳಿ ವಿದ್ಯುತ್ ದುರಸ್ತಿ ಮಾಡುವ ಅನಿವಾರ್ಯತೆ ಹೆಸ್ಕಾಂಗೆ ಎದುರಾಗಿತ್ತು. ಆದರೆ, ಇದ್ಯಾವುದನ್ನೂ ಲೆಕ್ಕಿಸದ ಹೆಸ್ಕಾಂನ ಸಿಬ್ಬಂದಿ, ಕಾರ್ಯನಿರ್ವಾಹಕ ಇಂಜಿನಿಯರ್ ಪುರುಷೋತ್ತಮ ಮಲ್ಯ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ದೀಪಕ ನಾಯಕ ಅವರ ಮಾರ್ಗದರ್ಶನ, ಹೆಸ್ಕಾಂ ಶಾಖಾಧಿಕಾರಿ ರಾಹುಲ್ ನೇತೃತ್ವ ಹಾಗೂ ಶಾಖಾಧಿಕಾರಿ ಉದಯ ಅವರ ಸಹಕಾರದೊಂದಿಗೆ ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ಮರದ ಟೊಂಗೆಯನ್ನು ತೆರವುಗೊಳಿಸಿದ್ದಾರೆ.
ರಿವರ್ ರ್ಯಪ್ಟ್ ಬೋಟ್ ಮೂಲಕ ಕಾಳಿ ನದಿಯ ನಡುಗಡ್ಡೆ ಪ್ರದೇಶಕ್ಕೆ ತೆರಳಿದ ಹೆಸ್ಕಾಂ ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೊಸಳೆಗಳು ವಾಸವಾಗಿರುವ ನೀರಿನ ಮಧ್ಯೆಯೆ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಮರದ ಟೊಂಗೆಯನ್ನು ತೆರೆವುಗೊಳಿಸಿ ವಿದ್ಯುತ್ ಲೈನನ್ನು ದುರಸ್ತಿಗೊಳಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮವನ್ನು ಕೈಗೊಂಡರು. ಹೆಸ್ಕಾಂ ಸಿಬ್ಬಂದಿಗೆ ದಾಂಡೇಲಿಯ ಜಂಗಲ್ ಲಾಡ್ಜಸ್ ಮತ್ತು ಪ್ರವಾಸೋದ್ಯಮಿ ವಿಷ್ಣುಮೂರ್ತಿ ರಾವ್ ಹಾಗೂ ರಿವರ್ ರ‍್ಯಾಪ್ಟಿಂಗ್ ತಂಡದವರು ಸಾಥ್ ನೀಡಿದರು. ಹೆಸ್ಕಾಂನ ಈ ಕೆಲಸಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.