ಬೆಂಗಳೂರು, ಮೇ. ೧: ರಾಷ್ಟ್ರದ ಗಣಿ ಸಂಪತ್ತು ಲೂಟಿ ಆಗುತ್ತಿರುವ ಬಗ್ಗೆ ಮಾಜಿ ಪ್ರಧಾನಿ ಹಾಗೂ ಜೆ.ಡಿ.ಎಸ್. ವರಿಷ್ಠ ಹೆಚ್.ಡಿ. ದೇವೇಗೌಡ ಆಂತಕ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಹಾಗೂ ಗಣಿ ಲೂಟಿ ಕುರಿತಾದ ಚಿತ್ರ ಕಥೆಯನ್ನು ಹೊಂದಿರುವ ಕನ್ನಡ ಚಲನ ಚಿತ್ರ ಪೃಥ್ವಿ ಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಗಣಿ ಲೂಟಿಯನ್ನು ನಿಲ್ಲಿಸಿ ರಾಷ್ಟ್ರದ ಸಂಪತ್ತನ್ನ ರಕ್ಷಿಸಬೇಕಾಗಿದೆ ಎಂದರು.
ಈ ಗಣಿ ಲೂಟಿಯಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿ ರಾಷ್ಟ್ರದ ಸಂಪತ್ತು ರಕ್ಷಿಸಲು ಗಣಿ ಲೂಟಿಗೆ ಅಂತ್ಯ ಹಾಡಬೇಕಿದೆ ಎಂದರು.
ಗಣಿ ಲೂಟಿ ಕುರಿತಾದ ನೈಜ ಕಥೆಯನ್ನ ಆಧರಿಸಿ ಪೃಥ್ವಿ ಚಲನಚಿತ್ರವನ್ನು ತಯಾರಿಸಲಾಗಿದೆ ಎನ್ನುವ ಕಾರಣಕ್ಕೆ ಸಿನಿಮಾ ನೋಡಿದ್ದಾಗಿ ಅವರು ಹೇಳಿ ವಾಸ್ತವಾಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ತಯಾರಿಸಲು ಚಿತ್ರ ತಂಡ ಶ್ರಮ ಪಟ್ಟಿದೆ ಎಂದರು.
ಈ ಹಿಂದೆ ತನ್ನ ಪತ್ನಿ ಜೊತೆ ಡಾ. ರಾಜ್ರವರ ಬಂಗಾರದ ಮನುಷ್ಯ ಚಿತ್ರ ನೋಡಿದ್ದೆ. ನಂತರ ತಮ್ಮ ಪುತ್ರ ಕುಮಾರಸ್ವಾಮಿ ನಿರ್ಮಾಣದ ಸೂರ್ಯ ವಂಶ ಚಲನಚಿತ್ರ ನೋಡಿದ್ದನ್ನ ಅವರು ಮೆಲುಕು ಹಾಕಿದರು.
ಮಾಜಿ ಪ್ರಧಾನಿ ದೇವೇಗೌಡರಿಗಾಗಿಯೇ ಪೃಥ್ವಿ ಚಿತ್ರ ತಂಡ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು. ಮಾಜಿ ಪ್ರಧಾನಿಗಳ ಜೊತೆ ಪಕ್ಷದ ವಕ್ತಾರ ವೈ.ಎಸ್.ವಿ. ದತ್ತಾ, ಚಿತ್ರದ ನಿರ್ಮಾಪಕರು ಸಹ ಚಿತ್ರವನ್ನ ವೀಕ್ಷಿಸಿದರು.