ಬೆಂಗಳೂರು, ಏಪ್ರಿಲ್ ೨೯ : ಕರ್ನಾಟಕ ಔದ್ಯಮಿಕ ಸಂಸ್ಥೆಗಳ ಕಾಯ್ದೆಯನ್ವ ಯ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಮೇ ೧ ರಂದು ಎಲ್ಲಾ ಕಾರ್ಖಾನೆಗಳು,ಕೈಗಾರಿಕಾ ಸಂಸ್ಥೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಅವರು ಎಲ್ಲಾ ಔದ್ಯಮಿಕ ಸಂಸ್ಥೆಗಳ ಮಾಲೀಕರಿಗೆ ಸೂಚಿಸಿದ್ದಾರೆ.
ಕಾರ್ಮಿಕ ಮತ್ತು ಮಾಲೀಕರ ನಡುವೆ ಸುಮಧುರ ಬಾಂಧವ್ಯವನ್ನು ಕಲ್ಪಿಸುವ ದೃಷ್ಟಿಯಿಂದ ಹಾಗೂ ಕಾರ್ಮಿಕ ದಿನಾಚರಣೆಯನ್ನು ಆಚರಿಸಲು ಕಾರ್ಮಿಕರಿಗೆ ಅನುಕೂಲವಾಗುವಂತೆ ಮೇ ೧ ರಂದು ತಮ್ಮ ಸಂಸ್ಥೆ/ಕಾರ್ಖಾನೆಗಳಿಗೆ ರಜಾ ಘೋಷಿಸುವಂತೆ ಅವರು ತಿಳಿಸಿದ್ದಾರೆ.
ಮೇಲ್ಕಂಡ ದಿನದಂದು ಅನಿವಾರ್ಯ ಸಂದರ್ಭಗಳಲ್ಲಿ ಅಂದು ಕೆಲಸಕ್ಕೆ ಹಾಜರಾಗುವ ಕಾರ್ಮಿಕರಿಗೆ ಎರಡು ಪಟ್ಟು ವೇತನ ಅಥವಾ ಬದಲಿ ದಿನದಂದು ರಜೆ ಸಹಿತ ವೇತನವನ್ನು ನೀಡಬೇಕಾಗುತ್ತದೆ. ಈ ಆದೇಶವನ್ನು ಪಾಲಿಸದ ಮಾಲೀಕರ ವಿರುದ್ಧ ಕಾಯ್ದೆಯನ್ವಯ ಕ್ರಮ ತೆಗೆದು ಕೊಳ್ಳಲಾಗುವುದೆಂದು ಎಲ್ಲಾ ಮಾಲೀಕರು ಮತ್ತು ನಿಯೋಜಕರಿಗೆ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಅವರು ತಿಳಿಸಿದ್ದಾರೆ.