ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ನಗರದ ಮಸೀದಿಗಳು ಕನ್ನಡಿಯಷ್ಟು ಪಾರದರ್ಶಕ - ಡಿ.ವೈ.ಎಸ್.ಪಿ. ವೇದಮೂರ್ತಿ

ಭಟ್ಕಳ: ನಗರದ ಮಸೀದಿಗಳು ಕನ್ನಡಿಯಷ್ಟು ಪಾರದರ್ಶಕ - ಡಿ.ವೈ.ಎಸ್.ಪಿ. ವೇದಮೂರ್ತಿ

Fri, 05 Mar 2010 08:27:00  Office Staff   S.O. News Service

ಭಟ್ಕಳ, ಮಾರ್ಚ್ 4: ಇಲ್ಲಿನ ಸುಲ್ತಾನ್ ಸ್ಟ್ರೀಟ್ ನಲ್ಲಿರುವ ಸುಲ್ತಾನ್ ಮಸೀದಿ, ಹಾಗೂ ಜಾಮಿಯಾ ಸ್ಟ್ರೀಟ್ ನ ಚಿನ್ನದ ಪಳ್ಳಿ(ಜಾಮಿಯಾ ಮಸೀದಿ) ಗಳು ಪಾರದರ್ಶಕತೆಯನ್ನು ಹೊಂದಿದ್ದು ಅದರಲ್ಲಿ ಯಾವುದೆ  ಭಯೋತ್ಪಾದನೆಯಾಗಲಿ ಅಥವಾ ಸಂಶಯಾಸ್ಪದ ಚಟುವಟಿಕೆಗಳ ಕುರುಹುಗಳಾಗಲು ಇಲ್ಲ ಎಂದು ಭಟ್ಕಳ ಡಿ.ವೈ.ಎಸ್.ಪಿ. ಡಾ. ಸಿ.ಬಿ. ವೇದಮೂರ್ತಿ ತಿಳಿಸಿದರು. ಅವರು ಗುರುವಾರದಂದು ಮಧ್ಯಾಹ್ನ ಇಲ್ಲಿನ ಎರಡು ಮಸೀದಿಗಳಿಗೆ ಭೇಟಿ ನೀಡಿದ ಬಳಿಕ ಪತ್ರಕರ್ತರನ್ನುದ್ದೇಶಿ ಮಾತನಾಡುತ್ತಿದ್ದರು.

 

4-bkl2.jpg

4-bkl2.jpg 

ಇಲ್ಲಿನ ಜನನಿಭಿಡ ಪ್ರದೇಶದಲ್ಲಿರುವ ಎರಡು ಮಸೀದಿಗಳನ್ನು ರಾಜ್ಯದ ದಿನಪತ್ರಿಕೆಯೊಂದು ಇವು ಭಯೋತ್ಪಾದನೆ ತಾಣವಾಗಿವೆ. ಇಲ್ಲಿ ಪೋಲಿಸರಿಗಾಗಲಿ, ಪತ್ರಕರ್ತರಿಗಾಗಲಿ ಪ್ರವೇಶವಿಲ್ಲ. ಇದು ಅಘೋಷಿತ ನಿರ್ಬಂಧಿತ ಪ್ರದೇಶವೆಂದು ಆರೋಪಿಸಿ ವರದಿಯನ್ನು ಪ್ರಕಟಿಸಿದ್ದರ ಹಿನ್ನೆಲೆಯಲ್ಲಿ ಡಿ.ಎಸ್.ಪಿ ವೇದಮೂರ್ತಿಯವರು ಪತ್ರಕರ್ತರ ಜತೆಗೂಡಿ ಸುಲ್ತಾನಪಳ್ಳಿ ಹಾಗೂ ಚಿನ್ನದಪಳ್ಳಿ(ಜಾಮಿಯಾ)ಗೆ ಭೇಟಿ ನೀಡಿ  ಅಲ್ಲಿನ ಪ್ರತಿಯೊಂದು ವಸ್ತುವನ್ನು ಪರಿಶಿಲಿಸಿದರು. ನಂತರ ಮಾತನಾಡಿದ ಅವರು  ಭಟ್ಕಳದ ಮಸೀದಿಗಳು ಭಯೋತ್ಪಾದಕತೆಯ ತಾಣವಾಗಿವೆ ಇಲ್ಲಿ ಭಯೋತ್ಪಾದನ ಚಟುವಟಿಕೆಗಳು ಜರುಗುತ್ತಿವೆ ಎಂಬ ಅರೋಪದಲ್ಲಿ ಹುರುಳಿಲ್ಲ. ಇಲ್ಲಿನ ಸುಲ್ತಾನ ಪಳ್ಳಿಯು ರಸ್ತೆಯ ಪಕ್ಕದಲ್ಲೆ ಇದ್ದು ರಸ್ತೆಯ ಮೇಲೆ ನಡೆದಾಡುವವರಿಗೆ ಒಳಗಡೆ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ, ಅಲ್ಲದೆ ಮಸೀದಿಯ ನೆಲಮಾಳಿಗೆ ಮೇಲ್ಮಾಳಿಗೆಯನ್ನು ತಾನು ಪರಿಶೀಲಿಸಿದ್ದು ಅಲ್ಲಿ ಹಳೆಯ ಸಾಮಾನುಗಳನ್ನು ಇಡಲಾಗಿದೆ. ನೆಲಮಾಳಿಗೆಯಲ್ಲಿ ಮಳೆಗಾಲದ ಸಮಯದಲ್ಲಿ ನೀರು ತುಂಬಿಕೊಂಡಿರುತ್ತದೆ. ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಬಾಡಿಗೆ ಕೊಡಲಿಕ್ಕೆ ಇಟ್ಟಿರುವ ಮನೆಬಳಕೆಯ ವಸ್ತುಗಳನ್ನು ಬಿಟ್ಟರೆ ಅಲ್ಲಿ ಬೇರೆ ಯಾವುದೆ ಅನುಮಾನಸ್ಪದ ವಸ್ತುಗಳು ಇಲ್ಲ. ಚಿನ್ನದ ಪಳ್ಳಿಯಲ್ಲಿ ಒಟ್ಟು ನಾಲ್ಕು ಅಂತಸ್ತುಗಳಿದ್ದು ಪ್ರತಿಯೊಂದನ್ನು ಪರಿಶೀಲಿಸಿದ್ದು ಅಲ್ಲಿಯೂ ಯಾವುದೆ ಅನುಮಾನಸ್ಪದ ಚಟುವಟಿಕೆಗಳು ನಡೆದ ಬಗ್ಗೆ ಗೋಚರಿಸುವುದಿಲ್ಲ ಪತ್ರಿಕೆಯ ವರದಿಯು ನಿರಾಧಾರವಾಗಿದೆ ಎಂದರು. ಮಸೀದಿಯ ಆಡಳಿತ ಮಂಡಳಿಯವರು ತುಂಬಾ ಖುಷಿಯಿಂದಲೆ ಮಸೀದಿಯ ಎಲ್ಲಾ ವಿಭಾಗಗಳನ್ನು ತೋರಿಸಿದರು ಎಂದ ಅವರು ಈ ಪ್ರದೇಶದಿಂದ ಮುಂಡಳ್ಳಿ ಮತ್ತಿತರ ಗ್ರಾಮಗಳಿಗೆ ಹಿಂದುಗಳು ಹೋಗುತ್ತಾರೆ. ಆದ್ದರಿಂದ ಇದು ಅಘೋಷಿತ ನಿರ್ಭಂಧಿತ ಪ್ರದೇಶ ಎನ್ನುವುದರಲ್ಲಿ ಹುರುಳಿಲ್ಲ ಎಂದರು ಈ ಸಂದರ್ಭದಲ್ಲಿ ತಂಝೀಮ್ ಸಂಸ್ಥೆಯ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮುಅಲ್ಲಿಮ್,  ಪ್ರಧಾನ ಕಾರ್ಯದರ್ಶಿ ಎಸ್.ಜೆ. ಸೈಯ್ಯದ್ ಖಾಲಿದ್. ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ,  ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಎಸ್.ಎಮ್.ಅಬ್ದುಲ್ ಅಝೀಮ್ ಅಂಬಾರಿ, ಹಾಗೂ ಮಸೀದಿ ಕಮಿಟಿಯ ಪ್ರಮುಖರು ಉಪಸ್ಥಿತರಿದ್ದರು. 


Share: