ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನಿತ್ಯಾನಂದನ ಹುಂಡಿಗೆ ಎಲ್ಟಿಟಿಇ ರೊಕ್ಕ!

ನಿತ್ಯಾನಂದನ ಹುಂಡಿಗೆ ಎಲ್ಟಿಟಿಇ ರೊಕ್ಕ!

Mon, 26 Apr 2010 15:27:00  Office Staff   S.O. News Service

26-nithyananda3.jpg

ಬೆಂಗಳೂರು, ಏ. 26 : ಆಧುನಿಕ ವಾತ್ಸಾಯನನ ವೇಷದಾರಿ ಕಳಂಕಿತ ದೇವಮಾನವ ಸ್ವಾಮಿ ನಿತ್ಯಾನಂದ ಮೇಲೆ ಇದೀಗ ಮತ್ತೊಂದು ಬಲವಾದ ಆರೋಪ ಕೇಳಿಬಂದಿದೆ. ಧ್ಯಾನಪೀಠ ಆಶ್ರಮದ ಅಕೌಂಟಿಗೆ ನಿಷೇಧಿತ ಎಲ್ ಟಿಟಿಇ ಮೂಲಕ ಹಣ ಸಂಗ್ರಹವಾಗಿರುವ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಸ್ವಾಮಿ ಹೊಂದಿರುವ ಎಲ್ಲ ಬ್ಯಾಂಕ್ ಅಕೌಂಟ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಎಂದು ಸಿಐಡಿ ಪೊಲೀಸರು ಚಿಂತನೆ ನಡೆಸಿದ್ದಾರೆ.

ತಮಿಳುನಾಡು ಮೂಲದ ರಾಜಶೇಖರನ್ ಅಲಿಯಾಸ್ ಸ್ವಾಮಿ ನಿತ್ಯಾನಂದನ ಲೀಲೆಗಳಿಗೆ ಕೊನೆ ಎಂಬುದೇ ಸಿಗುತ್ತಿಲ್ಲ. ಸಿಐಡಿ ಪೊಲೀಸರು ತನಿಖೆ ನಡೆಸಿದಷ್ಟು ಹೊಸಹೊಸ ರೋಚಕ ಅಂಶಗಳು ಈ ದೇವಮಾನವನಿಂದ ಹೊರಬೀಳತೊಡಗಿವೆ. ನಾಲ್ಕು ದಿನ ತಮ್ಮ ವಶಕ್ಕೆ ತಗೆದುಕೊಂಡ ಸಿಐಡಿ ಪೊಲೀಸರಿಗೆ ಮೊದಲೆರಡು ದಿನ ನಿತ್ಯಾನಂದ ಧ್ಯಾನ ಮತ್ತು ನಿದ್ರೆ ಮಾಡುವ ಮೂಲಕ ಚಳ್ಳೆ ಹಣ್ಣು ತಿನ್ನಿಸಿದ್ದ. ಆದರೆ, ಸ್ವಾಮಿಯ ಎಲ್ಲ ಅಟಾಟೋಪಗಳಿಗೆ ಲಗಾಮು ಹಾಕಲು ನಿರ್ಧರಿಸಿರುವ ಪೊಲೀಸರಿಗೆ ನಿತ್ಯಾನಂದನ ಹಣದ ಮೂಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಡದಿ ಬಳಿ ಇರುವ ಧ್ಯಾನಪೀಠದಲ್ಲಿ ಸಿಕ್ಕಿರುವ ಹಾರ್ಡ್ ಡಿಸ್ಕ್ ಗಳಲ್ಲಿ ನಿತ್ಯಾನಂದನಿಗೆ ದೇಶ, ವಿದೇಶಿಗಳಲ್ಲಿ ಇರುವ ಭಕ್ತರ ಮೂಲಕ ಹಣ ಸಂದಾಯವಾಗಿದೆ. ಇದರ ಜೊತೆಗೆ ಉಗ್ರಗಾಮಿ ಸಂಘಟನೆ ಶ್ರೀಲಂಕಾದ ಜಾಪ್ನಾ ಮೂಲದ ಲೀಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್ ಟಿಟಿಇ) ಮೂಲಕ ರೊಕ್ಕ ಬಂದಿರುವುದು ಪೊಲೀಸರು ನಡೆಸಿರುವ ತನಿಖೆಯಿಂದ ಗೊತ್ತಾಗಿದೆ. ಈ ಕಾರಣಕ್ಕಾಗಿ ನಿತ್ಯಾನಂದ ಹೊಂದಿರುವ ಅಷ್ಟೂ ಬ್ಯಾಂಕ್ ಅಕೌಂಟ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ನಾಲ್ಕು ದಿನ ಕಾಲ ಸಿಐಡಿ ಪೊಲೀಸರ ಬಂಧನ ಅವಧಿ ಮುಕ್ತಾಯಗೊಂಡಿದ್ದಿರಿಂದ ಇಂದು ಭಾರಿ ಬಿಗಿ ಬಂದೋಬಸ್ತ್ ಮೂಲಕ ಸ್ವಾಮಿ ನಿತ್ಯಾನಂದನನ್ನು ರಾಮನಗರ ಜಿಲ್ಲಾ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ನಾರಾಯಣಪ್ರಸಾದ್, ನಿತ್ಯಾನಂದನ ನ್ಯಾಯಾಲಯ ಬಂಧನ ಅವಧಿಯನ್ನು ಮತ್ತೆರಡು ದಿನ ವಿಸ್ತರಿಸಿ ಆದೇಶ ಹೊರಡಿಸಿದರು.

ಕೃಪೆ:ದಟ್ಸ್ ಕನ್ನಡ


Share: