ಹಾಸನ, ಫೆ.೧೯- ದೈವ ಶಕ್ತಿ ಮತ್ತು ದುಷ್ಟಶಕ್ತಿಗಳ ಕಥಾ ಹಂದರವನ್ನು ಹೊಂದಿರುವ ಗಗನಸಖಿ ಚಿತ್ರವನ್ನು ಏಪ್ರಿಲ್ ತಿಂಗಳ ಒಳಗೆ ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗಿದೆ ಎಂದು ಚಿತ್ರದ ನಿರ್ಮಾಪಕಿ ಶ್ರೀಮತಿ ಸುಮತಿ ಆರ್.ಪಾಟೀಲ್ ತಿಳಿಸಿದ್ದಾರೆ.
ಹಾಸನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸುಮತಿ ಪ್ರೊಡಕ್ಷನ್ಸ್ನ ಒಡತಿಯೂ ಆದ ಸುಮತಿ ಆರ್.ಪಾಟೀಲ್. ಪ್ರಥಮವಾಗಿ ಈ ಚಿತ್ರವನ್ನು ತಯಾರಿಸಿಸಲಾಗಿದೆ. ಹಾಡುಗಳ ಧ್ವನಿಮುದ್ರಣ, ಚಿತ್ರೀಕರಣ ಎಲ್ಲವೂ ಮುಕ್ತಾಯಗೊಂಡಿದ್ದು, ಚಿಕ್ಕಮಗಳೂರಿನ ಪರಿಸರದ ರಮ್ಯ ತಾಣದಲ್ಲಿ ಬಹುತೇಕ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ತಿಳಿಸಿದರು.
ಸುಮಾರು ೧ ಕೋಟಿ ರೂಪಾಯಿ ಬಜೆಟ್ನ ಈ ಚಿತ್ರ ಜನತೆಯ ಮನಮುಟ್ಟುವ ವಿಶ್ವಾಸವಿದೆ ಎಂದು ಹೇಳಿದ ಅವರು, ಗುಜರಾತಿ ಮೂಲದ ಭಾವಿತಾ ಗಾಂಧಿಯನ್ನು ಈ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯಿಸಲಾಗಿದೆ. ಅವರು ಈಗಾಗಲೇ ಹಿಂದಿಯ ಹಲವು ಜನಪ್ರಿಯ ಧಾರಾವಾಹಿ ಹಾಗೂ ಕಿರುಚಿತ್ರಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಪರಿಚಯಿಸಲಾಗುತ್ತಿದೆ ಎಂದರು.
ಹಾಸನದ ವೈದ್ಯರೂ ಆಗಿರುವ ಡಾ.ವಸಂತ ಮಾಧವ್ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿ ಅನುಭವ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಗಗನಸಖಿ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡಿಗರಿಗೆ ಪರಿಚಿತರಾಗಲಿದ್ದಾರೆ ಎಂದು ಹೇಳಿದ ಅವರು, ನಿರ್ಮಾಪಕಿಯಾಗಿರುವ ತಾವು ಚಿತ್ರಕ್ಕೆ ಹಾಡೊಂದನ್ನು ರಚಿಸಿ ಹಾಡಿರುವುದಾಗಿ ಸುಮತಿ ಆರ್.ಪಾಟೀಲ್ ತಿಳಿಸಿದರು.
ಚಿತ್ರದ ನಾಯಕ ಡಾ.ವಸಂತ ಮಾಧವ್ ಮತ್ತು ನಾಯಕಿ ಭವಿತಾ ಗಾಂಧಿ ಉಪಸ್ಥಿತರಿದ್ದರು.