ಭಟ್ಕಳ, ಅಕ್ಟೋಬರ್ 21: ತಾಲೂಕಿನ ಚೌಥನಿ ಭಾಗದಲ್ಲಿ ಚರಂಡಿಯಲ್ಲಿ ತುಂಬಿಕೊಂಡ ಕೊಳಚೆ ನೀರು, ರಸ್ತೆ ಹಾಗೂ ಕೃಷಿ ಭೂಮಿಯತ್ತ ಪ್ರವಹಿಸುತ್ತಿದ್ದು, ಈ ಕುರಿತು ಪುರಸಭಾ ಆಡಳಿತ ಮೌನವಹಿಸಿದೆ ಎಂದು ಆಪಾದಿಸಿರುವ ಸುತ್ತಮುತ್ತಲ ಸಾರ್ವಜನಿಕರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಳೆ, ಬಿಸಿಲೆನ್ನದೇ ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಜನರು ನಡೆದಾಡುವಾಗ ಮೈಮೇಲೆ ಸಿಡಿಯುತ್ತಿದ್ದು, ಸಂಚಾರ ವ್ಯವಸ್ಥೆಗೆ ಆಪತ್ತು ಬಂದಿದೆ ಎಂದು ಜನರು ಅಳಲನ್ನು ತೋಡಿಕೊಂಡರು. ರಸ್ತೆಯ ಪಕ್ಕದ ಕೃಷಿ ಭೂಮಿಯಲ್ಲಿ ಕೊಳಚೆ ನೀರಿನ ಕಾರಣ ಕೃಷಿ ಚಟುವಟಿಕೆ ನಡೆಸುವುದೇ ಕಷ್ಟಕರವಾಗಿದೆ. ದಿನೇ ದಿನೇ ರೋಗರುಜಿನುಗಳು ಹೆಚ್ಚುತ್ತಿದ್ದು, ಸಮಸ್ಯೆಯನ್ನು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಮಾತ್ರ ಮರೀಚಿಕೆಯಾಗಿಯೇ ಉಳಿದುಕೊಂಡಿದೆ ಎಂದು ಅವರು ಆಪಾದಿಸಿದರು. ಈ ಕೂಡಲೇ ಪುರಸಭಾ ಅಧಿಕಾರಿಗಳಿಗೆ ಸರಿಪಡಿಸಲು ಆದೇಶ ನೀಡುವಂತೆ ಮನವಿಯಲ್ಲಿ ವಿನಂತಿಸಿಕೊಳ್ಳಲಾಗಿದ್ದು, ತಪ್ಪಿದ್ದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಲಾಗಿದೆ. ಭಟ್ಕಳ ಪುರಸಭಾ ಸದಸ್ಯ ಕೃಷ್ಣಾನಂದ ಪೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಟ್ಕಳ ಉಪವಿಭಾಗಾಧಿಕಾರಿ ತ್ರಿಲೋಕಚಂದ್ರ ಮನವಿಯನ್ನು ಸ್ವೀಕರಿಸಿದರು.