ಬೆಂಗಳೂರು, ಡಿಸೆಂಬರ್ 31 ತಮ್ಮ ನೆಚ್ಚಿನ ನಾಯಕನ ಹಠಾತ್ ನಿರ್ಗಮನದ ಸುದ್ದಿ ತಿಳಿಯುತ್ತಿದ್ದಂತೆ ನಗರದ ನ್ಯಾಶನಲ್ ಕಾಲೇಜು ಆವರಣದ ಬಳಿ ಆಗಮಿಸಿದ ವಿಷ್ಣುವರ್ಧನ್ ಅಭಿಮಾನಿಗಳು ಹಿಂಸೆಗಿಳಿದ ಘಟನೆ ವರದಿಯಾಗಿದೆ.


ನ್ಯಾಶನಲ್ ಕಾಲೇಜು ಆವರಣದಲ್ಲಿ ವಿಷ್ಣುವರ್ಧನ್ ರವರ ಪಾರ್ಥವ ಶರೀರವನ್ನು ಸಾರ್ವಜನಿಕರ ಅಂತಿಮದರ್ಶನಕ್ಕಾಗಿ ಇಡಲಾಗಿದ್ದು ವ್ಯವಸ್ಥೆಯಲ್ಲಿನ ಅಸಮರ್ಪಕತೆ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತು.
ಹಿಂಸೆಗಿಳಿದ ಅಭಿಮಾನಿಗಳು ಕಲ್ಲುತೂರಾಟ, ವಾಹನಗಳಿಗೆ ಜಖಂ ನಡೆಸಿ ನಿಲ್ಲಿಸಿದ್ದ ಪೋಲೀಸ್ ವಾಹನವೊಂದಕ್ಕೂ ಬೆಂಕಿ ಹಚ್ಚಿದರು. ಕಲ್ಲುತೂರಾಟದಲ್ಲಿ ಕನಿಷ್ಟ ಹತ್ತು ಜನರಿಗೆ ಗಾಯವಾಗಿದೆ, ೭೮ ಬಸ್ಸುಗಳಿಗೆ ಹಾನಿಯಾಗಿದೆ. ಮೂರು ಪತ್ರಿಕಾ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ಪೋಲೀಸರು ಹರಸಾಹಸಪಡಬೇಕಾಯಿತು. ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೋಲೀಸರು ರಬ್ಬರ್ ಬುಲೆಟ್ ಹಾಗೂ ಅಶ್ರುವಾಯು ಉಪಯೋಗಿಸಬೇಕಾಯಿತು. ರಬ್ಬರ್ ಬುಲೆಟ್ ಗಳಿಂದ ಹಲವರು ಗಾಯಗೊಂಡರು.


















ಜೆಪಿ ನಗರದ ವಿಷ್ಣುವರ್ಧನ್ ನಿವಾಸದಿಂದ ನ್ಯಾಶನಲ್ ಕಾಲೇಜು ಆವರಣಕ್ಕೆ ಪಾರ್ಥವ ಶರೀರವನ್ನು ಕೊಂಡು ತರುತ್ತಿದ್ದಾಗ ಜಯನಗರ ಆಸ್ಪತ್ರೆ ಬಳಿ ಮೊದಲು ದೊಂಬಿ ಪ್ರಾರಂಭವಾಯಿತು. ಸುಗಮ ಸಂಚಾರಕ್ಕಾಗಿ ಪೋಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಅಭಿಮಾನಿಗಳು ಇದರಿಂದ ರೊಚ್ಚಿಗೆದ್ದು ಹಿಂಸೆಗಿಳಿದರು. ಸುಂಕದಕಟ್ಟೆ, ರಾಜಾಜಿನಗರ, ರಾಮಕೃಷ್ಣ ಆಶ್ರಮ ಮೊದಲಾದೆಡೆ ಬಸ್ಸುಗಳಿಗೆ ಬೆಂಕಿ ಹಾಗೂ ಕಲ್ಲುತೂರಾಟ ನಡೆಸಲಾಯಿತು.
ಇದೇ ವೇಳೆ ಮೈಸೂರು ಸಹಿತ ರಾಜ್ಯದ ದಕ್ಷಿಣ ಭಾಗದ ವಿವಿಧ ಪಟ್ಟಣ ನಗರಗಳಲ್ಲಿ ಸ್ವಯಂ ಘೋಷಿತ ಬಂದ್ ಆಚರಿಸಲಾಯಿತು. ವಿಷ್ಣುವರ್ಧನ್ ರವರ ಪತ್ನಿ ಭಾರತಿ ವಿಷ್ಣುವರ್ಧನ್ ರವರೇ ಬಳಿಕ ಜನರೆದುರು ನಿಂತು ಹಿಂಸೆಗಿಳಿಯದಂತೆ ಮನವಿ ಮಾಡಿಕೊಂಡರು.
ಹಿಂಸೆಯ ಕಾರಣ ಹಲವು ನಗರ ಸಾರಿಗೆ ಬಸ್ಸುಗಳು ಓಡಾಟ ನಿಲ್ಲಿಸಿದವು. ಜಯನಗರ, ಬಸವನಗುಡಿ, ಉತ್ತರಹಳ್ಳಿ, ಕೆಂಗೇರಿ ಮೊದಲಾದೆಡೆ ಬಸ್ ಸಂಚಾರ ವ್ಯತ್ಯಯಗೊಂಡಿದ್ದವು. ಬಸ್ಸುಗಳ ಹಾಗೂ ನಾಗರಿಕರ ಕ್ಷೇಮಕ್ಕಾಗಿ ಈ ಕ್ರಮ ಅನುಸರಿಸಬೇಕಾಯಿತು ಎಂದು ಬಿಎಂಟಿಸಿ ವ್ಯವಸ್ಥಾಪಕರಾದ ಸೈಯದ್ ಜಮೀರ್ ಪಾಶಾ ತಿಳಿಸಿದ್ದಾರೆ.