ಸಕಲೇಶಪುರ, ಡಿಸೆಂಬರ್ 28:ಮೇಲಿನ ಅಧಿಕಾರಿಗಳು ಬಾರೀ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಶಿಕ್ಷಕಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣವೊಂದು ನಡೆದಿದೆ.
ಹೆತ್ತೂರು ಹೋಬಳಿ ಯರಗಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇತ್ತೀಚೆಗೆ ಕೊಂಗಳಿ ಗ್ರಾಮದ ಶಾಲೆಗೆ ವರ್ಗಾವಣೆಯಾಗಿದ್ದ ವಸಂತಕುಮಾರಿ ಆತ್ಮಹತ್ಯೆಗೆ ಯತ್ನಿಸಿರುವ ಶಿಕ್ಷಕಿ. ಇದೀಗ ಹಾಸನದ ಮಂಗಳಾ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯರಗಳ್ಳಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಆ ಶಾಲೆಯನ್ನು ರದ್ದುಪಡಿಸಲಾಗಿತ್ತು. ಶಾಲೆ ರದ್ದುಗೊಂಡ ನಂತರ ಆಕೆ ಪಟ್ಟಣದ ಕುಶಾಲನಗರ ಬಡಾವಣೆಯ ಸರ್ಕಾರಿ ಕಿ.ಪ್ರಾ.ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರದ್ದುಪಡಿಸಿದ್ದ ಶಾಲೆಯನ್ನು ಪುನಃ ತೆರೆಯಬೇಕು ಎಂದು ಯರಗಳ್ಳಿ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಒತ್ತಾಯ ಮಾಡಿದ್ದರಿಂದ, ಪುನಃ ಶಾಲೆಯನ್ನು ತೆರೆಯಲಾಗಿತ್ತಾದರೂ ವಿದ್ಯಾರ್ಥಿಗಳ್ಯಾರು ಬರಲಿಲ್ಲದ ಕಾರಣಕ್ಕೆ ಶಾಲೆಯನ್ನು ಶಾಶ್ವತವಾಗಿ ಮುಚ್ಚಲಾಯಿತು. ಶಿಕ್ಷಕಿ ವಸಂತಕುಮಾರಿಯನ್ನು ವಣಗೂರು ಗ್ರಾಮ ಪಂಚಾಯ್ತಿಗೆ ಒಳಪಡುವ ಕೊಂಗಳ್ಳಿ ಗ್ರಾಮದ ಶಾಲೆಗೆ ನಿಯೋಜನೆ ಮಾಡಿ ಕ್ಷೇತ್ರ ಶಿಕ್ಷಣ ಅಧಿಕಾರಿ ಆದೇಶ ಹೊರಡಿಸಿದರು ಎನ್ನಲಾಗಿದೆ. ಹಾಸನದಿಂದ ಸುಮಾರು ೯೦ ಕಿ.ಮೀ. ದೂರದಲ್ಲಿರುವ ಕೊಂಗಳ್ಳಿ ಗ್ರಾಮದ ಶಾಲೆಗೆ ಹೋಗಿ ಬರುವುದಕ್ಕೆ ಸಾಧ್ಯವಿಲ್ಲ ಪಟ್ಟಣದ ಹತ್ತಿರದ ಯಾವುದಾದರೂ ಶಾಲೆಗೆ ವರ್ಗಾವಣೆ ಮಾಡಿಕೊಡುವಂತೆ ಜಿ.ಪಂ. ಅಧ್ಯಕ್ಷರು, ಶಾಸಕರಿಂದ ಶಿಕ್ಷಕಿ ಪತ್ರ ತಂದಿದ್ದರು ಎನ್ನಲಾಗಿದೆ. ಯರಗಳ್ಳಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಶಿಕ್ಷಣ ಇಲಾಖೆಗೆ ಸಹಿ ಮಾಡಿಕೊಟ್ಟು ಇದೀಗ ಜನಪ್ರತಿಧಿಗಳಿಂದ ಪತ್ರ ತಂದು ರಾಜಕಾರಣ ಮಾಡುತ್ತೀರಾ, ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿರುವ ಆದೇಶದಂತೆ ಕೊಂಗಳ್ಳಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಹೆತ್ತೂರು ಶಿಕ್ಷಣ ಸಂಯೋಜಕ ವೆಂಕಟೇಶ್ ಶಿಕ್ಷಕಿಗೆ ಆದೇಶ ನೀಡಿದರು ಎನ್ನಲಾಗಿದೆ.
ಉದ್ದೇಶಪೂರ್ವಕವಾಗಿಯೇ ಯರಗಳ್ಳಿ ಹಾಗೂ ಕೊಂಗಳ್ಳಿ ಕುಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಶಿಕ್ಷಣ ಸಂಯೋಜಕ ವೆಂಕಟೇಶ್ ಹಾಗೂ ಸಿ.ಆರ್.ಪಿ ಮಲ್ಲೇಶ್ ವಿರುದ್ಧ ಆರೋಪಿಸಿ ಆತ್ಮಹತ್ಯೆಗೆ ಯತ್ನಸಿರುವುದಾಗಿ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಈ ಸಂಬಂಧ ಹಾಸನದ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾತುಕತೆ ಮೂಲಕ ಮೊದಲು ಸಮಸ್ಯೆ ಬಗೆಹರಿಸಿಕೊಳ್ಳಿ, ಇಲ್ಲವಾದರೆ ಪ್ರಕರಣ ದಾಖಲು ಮಾಡುವುದಾಗಿ ಠಾಣೆಯ ಪಿಎಸ್‌ಐ ಸಲಹೆ ನೀಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.