ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ: ಕೂಸಿನ ಮನೆ ಶಿಶು ಆರೈಕೆದಾರರಿಗೆ ತರಬೇತಿ

ಕಾರವಾರ: ಕೂಸಿನ ಮನೆ ಶಿಶು ಆರೈಕೆದಾರರಿಗೆ ತರಬೇತಿ

Sun, 05 Nov 2023 01:34:43  Office Staff   S O News

ಕಾರವಾರ:  ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೊಗಾವಕಾಶಗಳನ್ನು ಕಲ್ಪಿಸಲು ಮತ್ತು ನರೇಗಾ ಯೋಜನೆಯಡಿ ಮಹಿಳೆಯರು ಕೂಲಿಕೆಲಸ ನಿರ್ವಹಿಸಲು ಪೂರಕ ವಾತಾವರಣ ಹಾಗೂ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಆರೋಗ್ಯ ಪೌಷ್ಟಿಕತೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕೂಸಿನ ಮನೆ ಪ್ರಾರಂಭಿಸಲಾಗಿದೆ ಎಂದು ತಾಲೂಕ ಪಂಚಾಯತನ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ ಎಂ. ಘಸ್ತೆ ಹೇಳಿದರು.
ಹಳಿಯಾಳ ತಾಲೂಕ ಪಂಚಾಯತನ ಸಾಮರ್ಥ್ಯ ಸೌಧದಲ್ಲಿ ಶಿಶು ಆರೈಕೆದಾರರಿಗೆ ಏರ್ಪಡಿಸಿದ್ದ ಏಳು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಳಿಯಾಳ ತಾಲೂಕಿನ 6 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಕೇಂದ್ರಗಳನ್ನು ಪ್ರಾರಂಭಿಸಲು ಈಗಾಗಲೇ ಸರ್ಕಾರಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ಶಿಶು ಆರೈಕೆದಾರರಿಗೆ ತರಬೇತಿ ಪ್ರಾರಂಭಿಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುವ ಸಂಧರ್ಭದಲ್ಲಿ ಅವರ ಸುರಕ್ಷತೆ ಮತ್ತು ಪೋಷಣೆ ಅಗತ್ಯವಾಗಿದ್ದು, ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ವಿಕಾಸದ ಹಿತದೃಷ್ಟಿಯಿಂದ ಈ ಒಂದು ಅರ್ಥ ಪೂರ್ಣವಾದ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದೆ ಎಂದರು.

ಕೇರ್ ಟೇಕರ್ಸ್ (ಶಿಶು ಆರೈಕೆದಾರರು) ಮಕ್ಕಳ ಪೋಷಣೆ ಮಾಡಲು ನರೇಗಾ ಯೋಜನೆಯ ದಿನಗೂಲಿ 316 ರೂಗಳಂತೆ ಕೂಲಿ ಪಾವತಿಸಲಾಗುತ್ತದೆ. ಹಾಗೂ 100 ದಿನ ಕೆಲಸ ಕೂಡ ಸಿಗುವುದರಿಂದ ಆರ್ಥಿಕವಾಗಿ ಮಹಿಳೆಯರು ಸಬಲರಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ವಿರೂಪಾಕ್ಷ ಗೌಡ ಪಾಟೀಲ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಡಾ. ಲಕ್ಷ್ಮೀದೇವಿ ಎಸ್, ಅಂಗನವಾಡಿ ಮೇಲ್ವಿಚಾರಕಿ ಅನುಸೂಯಾ, ಐಇಸಿ ಸಂಯೋಜಕಿ ಸೌಂದರ್ಯ ಕುರಕುರಿ ಹಾಗೂ ತಾಲ್ಲೂಕು ಪಂಚಾಯತ್ ನರೇಗಾ ಸಿಬ್ಬಂದಿಗಳು ಉಪಸ್ಥಿತರಿದ್ದರು.


Share: