ಚಿಕ್ಕಬಳ್ಳಾಪುರ ಡಿಸೆಂಬರ್ ೦೧: ಗೌರಿಬಿದನೂರು ತಾಲ್ಲೂಕಿನ ಆಂದ್ರ ಗಡಿ ಭಾಗದಲ್ಲಿ ಹಿಂದೂಪುರಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ 230 ಎಕರೆ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಕೈಗಾರಿಕಾ ವಲಯ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನ್ವರ್ ಪಾಷ ತಿಳಿಸಿದರು.
ಅವರು ಕೈಗಾರಿಕಾಭಿವೃದ್ಧಿ ಪ್ರದೇಶವನ್ನು ಪರಿಶೀಲಸಿದ ನಂತರ ಮಾತನಾಡುತ್ತಾ 230 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು ರಸ್ತೆ, ಕುಡಿಯುವ ನೀರು ವಿದ್ಯುತ್ ಸೌಲಭ್ಯವಿದ್ದು ಉತ್ತಮ ಕೈಗಾರಿಕಾ ವಲಯವಾಗಿ ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.
ಗೌರಿಬಿದನೂರು ತಾಲ್ಲೂಕು ಆಂದ್ರ ಗಡಿಭಾಗಕ್ಕೆ ಹೊಂದಿಕೊಂಡಿದ್ದು ಹಿಂದುಳಿದ ಪ್ರದೇಶವಾಗಿದೆ ಈ ಕೈಗಾರಿಕಾ ವಲಯ ಸ್ಥಾಪನೆಯಾದ ಮೇಲೆ ಹೆಚ್ಚಾಗಿ ಯುವಕರಿಗೆ ಉದ್ಯೋಗ ಅವಕಾಶ ದೊರೆಯಲಿದೆ ಎಂದರು.
ಈ ಕೈಗಾರಿಕಾ ವಲಯದಲ್ಲಿ ಆಹಾರ ಪದಾರ್ಥಗಳ ಸಂಸ್ಕರಣೆ, ರೆಡಿಮೇಡ್ ಗಾರ್ಮೆಂಟ್ಸ್ ಕೈಗಾರಿಕೆ ಇತ್ಯಾದಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್, ತಹಶೀಲ್ದಾರ್ ಡಾ|| ಸುಧಾ ಉಪಸ್ಥಿತರಿದ್ದರು.