ಕಾರವಾರ: ಜಿಲ್ಲೆಯಲ್ಲಿನ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಎರಡು ಇಲಾಖೆಗಳು ಪರಸ್ಪರ ಸಮನ್ವಯದಿಂದ ಚರ್ಚಿಸಿ, ಶೀಘ್ರದಲ್ಲಿ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಅವರು ಬುಧವಾರ, ಶಿರಸಿಯ ಕೆನರಾ ವೃತ್ತ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅತ್ಯಂತ ಪ್ರಮುಖ ಸಮಸ್ಯೆಗಳಾದ , 1978 ರ ಪೂರ್ವದ ಅರಣ್ಯ ಅತಿಕ್ರಮಣ ಸಕ್ರಮ ಕುರಿತು ಬಾಕಿ ಇರುವ ಪ್ರಕರಣಗಳು, ಹಂಗಾಮಿ ಲಾಗಣಿಗೆ ನೀಡಿದ ಪ್ರಕರಣಗಳು ಮತ್ತು ಖಾಯಂ ಲಾಗಣಿಗೆ ನೀಡಿದ ಪ್ರಕರಣಗಳು , ಖಾಯಂ ಲಾಗಣಿಗೆ ಮಂಜೂರಿ ಪ್ರಕರಣಗಳು, ಡೀಮ್ಡ್ ಫಾರೆಸ್ಟ್ ಜಮೀನಿಗಳ ವಿಷಯಗಳು, ಅರಣ್ಯ ಜಮೀನುಗಳಲ್ಲಿ ವಿದ್ಯುತ್ ಸಂಪರ್ಕದ ಲೈನ್ ಗಳ ಸಮಸ್ಯೆ, ಬೆಟ್ಟ ಜಮಿನುಗಳು ಹಾಗೂ ಧರ್ಮಾ ಜಲಾಶಯ ನಿರಾಶ್ರಿತರ ಜಮೀನುಗಳ ವಿಷಯಗಳ ಕುರಿತಂತೆ ವಿಸ್ತೃತವಾದ ಚರ್ಚೆ ನಡೆಯಿತು.
ಈ ಎಲ್ಲಾ ಸಮಸ್ಯೆಗಳು ಸಾರ್ವಜನಿಕ ಉದ್ದೇಶದ ಹಲವು ಕಾಮಗಾರಿಗಳಿಗೆ ಅಡಚಣೆಯಾಗುವುದರ ಜೊತೆಗೆ ಜಿಲ್ಲೆಯ ಜನ ಸಾಮಾನ್ಯರು ಹಲವು ವರ್ಷಗಳಿಂದ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ಇವುಗಳನ್ನು ಆದ್ಯತೆಯ ನಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ಯರ್ಥಪಡಿಸುವ ಮೂಲಕ ಇದಕ್ಕೆ ಸೂಕ್ತ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್,ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ಗಳು, ಜಿಲ್ಲೆಯ ಅರಣ್ಯ ಮತ್ತು ಕಂದಾಯ ಇಲಾಖೆಯ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.