ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನಾವು ಎಂಬ ಭಾವನೆಯೊಂದಿಗೆ ಜೀವಿಸಲು ಭಾರತೀ ಸ್ವಾಮಿ ಕರೆ

ನಾವು ಎಂಬ ಭಾವನೆಯೊಂದಿಗೆ ಜೀವಿಸಲು ಭಾರತೀ ಸ್ವಾಮಿ ಕರೆ

Sun, 11 Apr 2010 08:52:00  Office Staff   S.O. News Service
ಭಟ್ಕಳ:  ನಾನು ಎನ್ನುವುದು ಸರಿಯಲ್ಲ ನಾವು ಎಂಬ ಭಾವನೆಯೊಂದಿಗೆ ಜೀವಿಸಬೇಕು ಎಂದು  ಹೊಸನಗರ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳು ಅಭಿಪ್ರಯಾ ಪಟ್ಟರು.  ಅವರು ಮುರ್ಡೇಶ್ವರದ  ಬಸ್ತಿಮಕ್ಕಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾ ಭವನವನ್ನು  ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು. ತನ್ನ ತನದ ಭಾವನೆಗೆ ಯಾವುದೇ ಬೆಲೆಕಟ್ಟಲಾಗದು. ಭಟ್ಕಳ ಸೀಮಾ ಪರಿಷತ್‌ನವರು ಐಕ್ಯತೆಯಿಂದ ಸಭಾಭವನವನ್ನು ನಿರ್ಮಿಸಿದ್ದಾರೆ. ಇಲ್ಲಿ ಸದಾ ಕಾರ್ಯಕ್ರಮಗಳು ನಡೆದು ಜನರಿಗೆ ಉಪಯೋಗವಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಶಾಸಕ ಜೆ.ಡಿ. ನಾಯ್ಕ  ಪ್ರತಿಯೊಂದು ಸಮಾಜದ ಕುರಿತು ತಮಗೆ ಉತ್ತಮ ಅಭಿಪ್ರಾಯವಿದೆ. ಹವ್ಯಕ ಸಮಾಜದ ಕುರಿತು ವಿಶೇಷ ಅಭಿಮಾನವಿದೆ. ಶಾಸಕನಾದ ಮೇಲೆ ಸಮಾಜದ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುವುದು ಅಸಾಧ್ಯ. ಆದರೂ ತಾನು ಸಮಾಜದ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ  ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಜಿಪಂ ಸದಸ್ಯ ಮಂಕಾಳ ವೈದ್ಯ ಕೇಂದ್ರ ಪರಿಷತ್ತಿನ ಆರ್.ಎಸ್.ಹೆಗಡೆ ಹರಿಗೆ, ಮಾಜಿ ಸಚಿವ ಡಾ. ಎಂ.ಪಿ.ಕರ್ಕಿ ಹವ್ಯಕ ಮಂಡಲದ ಅಧ್ಯಕ್ಷ ಜಿ.ಜಿ. ಭಟ್ಟ ಉಪಸ್ಥಿತರಿದ್ದರು. ಆರಂಭದಲ್ಲಿ ಶಂಖನಾದ, ವೇ.ಮೂ. ರವಿ ಭಟ್ಟ ಬಲ್ಸೆ ಹಾಗೂ ವೇ.ಮೂ. ವಿಶ್ವನಾಥ ಭಟ್ಟ ಇವರಿಂದ ವೇದಘೋಷ, ಜಿತೇಂದ್ರ ಸಂಗಡಿಗರಿಂದ ಪ್ರಾರ್ಥನೆ, ಹವ್ಯಕ ವಲಯದ ಅಧ್ಯಕ್ಷ ಕೃಷ್ಣಾನಂದ ಭಟ್ಟ ಬಲ್ಸೆಯವರಿಂದ ಸಭಾ ಪೂಜೆ ನಡೆಯಿತು.  ಹವ್ಯಕ ವಲಯದ ಕಾರ್ಯದರ್ಶಿ ನೀಲಕಂಠ ಯಾಜಿ ಕಾರ್ಯಕ್ರಮ ನಿರ್ವಹಿಸಿದರು. ಪುಣ್ಯಕೋಟಿ ಟ್ರಸ್ಟಿನ ಧರ್ಮದರ್ಶಿ ರಾಧಾಕೃಷ್ಣ ಭಟ್ಟ ವಂದಿಸಿದರು. 

Share: