ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಸರಣಿ ಕೊಲೆಗಾರ ಮೋಹನ್ ಕುಮಾರ್ ಬಂಧನ - ೧೮ ತರುಣಿಯರ ಹತ್ಯೆ ಒಪ್ಪಿಕೊಂಡ ಆರೋಪಿ

ಮಂಗಳೂರು: ಸರಣಿ ಕೊಲೆಗಾರ ಮೋಹನ್ ಕುಮಾರ್ ಬಂಧನ - ೧೮ ತರುಣಿಯರ ಹತ್ಯೆ ಒಪ್ಪಿಕೊಂಡ ಆರೋಪಿ

Thu, 22 Oct 2009 02:37:00  Office Staff   S.O. News Service
ಮಂಗಳೂರು, ಅ.21: ಹದಿನೆಂಟು ಮಂದಿ ಅಮಾಯಕ ಯುವತಿಯರನ್ನು ಕೊಲೆಗೈದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನದ ಮೋಹನ್ ಕುಮಾರ್ (43) ಎಂಬಾತನನ್ನು ಪುತ್ತೂರು ಎ‌ಎಸ್ಪಿ ಚಂದ್ರಗುಪ್ತ ಮತ್ತು ಬಂಟ್ವಾಳ ಸಿಪಿ‌ಐ ನಂಜುಂಡೇಗೌಡರ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
 
22mng2.jpg 
ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರು ಮತ್ತು ಎಸ್‌ಪಿ ಡಾ.ಎ.ಎಸ್.ರಾವ್ ಬುಧವಾರ ಸಂಜೆ ಜಿಲ್ಲಾ ಪೊಲೀಸ್ ಅತಿಥಿಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದರು. ಆರೋಪಿಯು ದಕ್ಷಿಣ ಕನ್ನಡ ಜಿಲ್ಲೆಯ ೧೨ ಮತ್ತು ಕಾಸರಗೋಡು ಜಿಲ್ಲೆಯ ೫ ಹಾಗೂ ಕೊಡಗು ಜಿಲ್ಲೆಯ ಒಬ್ಬ ಯುವ ತಿಯನ್ನು ಮದುವೆಯಾಗುವುದಾಗಿ‌ಆಮಿಷವೊಡ್ಡಿ ಉಪಾಯದಿಂದ ರಾಜ್ಯದ ಬೇರೆ ಬೇರೆ ಕಡೆ ಕರೆ ದೊಯ್ದು, ಅತ್ಯಾಚಾರವೆಸಗಿ ಸಯನೈಡ್ ನೀಡಿ ಕೊಲೆಗೈದಿದ್ದಾನೆ. ಆತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಐಜಿಪಿ ಹೇಳಿದರು. ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಅನಿತಾ (೨೨) ೨೦೦೯ರ ಜೂನ್ ೧೭ರಂದು ನಾಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಪುತ್ತೂರು ಎ‌ಎಸ್ಪಿ ವಿಶೇಷ ತಂಡವೊಂದು ರಚಿಸಿದ್ದರು. ಈ ತಂಡದಲ್ಲಿ ಬಂಟ್ವಾಳ ಸಿಪಿ‌ಐ ನಂಜುಂಡೇಗೌಡ,ಎಸ್‌ಐ ಶಿವಪ್ರಕಾಶ್ ಹಾಗೂ ವಿವೇಕಾನಂದ ಮತ್ತಿತರರಿದ್ದು, ತನಿಖೆಯನ್ನು ಚುರುಕುಗೊಳಿಸಿದಾಗ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಕೆಲವೊಂದು ಮಾಹಿತಿ ಸಿಕ್ಕಿತು. ಅದರಂತೆ ಕನ್ಯಾನದ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಆತ ಮೋಹನ್ ಕುಮಾರ್‌ನ ಹೆಸರು ಹೇಳಿದ. ಹಾಗೇ ದೇರಳಕಟ್ಟೆಯ ಹೆಂಡತಿಯ ಮನೆಯಲ್ಲಿದ್ದ ಮೋಹನ್ ಕುಮಾರ್‌ನನ್ನು ಬಂಧಿಸಿ ವಿಚಾರಿಸಿದಾಗ ಆತ ಕಳೆದ ಐದು ವರ್ಷಗಳಲ್ಲಿ ೧೮ ಮಂದಿ ತರುಣಿಯರನ್ನು ಕೊಲೆ ಮಾಡಿದುದನ್ನು ಮತ್ತು ಇನ್ನೊಂದೆರೆಡು ತಿಂಗಳಲ್ಲಿ ಮತ್ತೆ ೩ ಮಂದಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದುದನ್ನು ಕೂಡ ಬಾಯ್ಬಿಟ್ಟನೆಂದು ಎಸ್‌ಪಿ ಡಾ. ಎ.ಎಸ್.ರಾವ್ ತಿಳಿಸಿದರು.  

ಪ್ರೀತಿಯ ನಾಟಕ: ಆರೋಪಿ ಮೋಹನ್ ಕುರ್ಮಾರ್ ಅಂಗಡಿ , ಬಸ್ ನಿಲ್ದಾಣದ ಬಳಿ ಸುತ್ತಾಡುತ್ತಾ ಅಮಾಯಕ ಯುವತಿಯರ ಹಿಂದೆ ಬೀಳುತ್ತಾನೆ. ಅವರ ದೃಷ್ಟಿ ತನ್ನತ್ತ ಹರಿದೊಡನೆ ಮಾತುಕತೆಗೆ ಮುಂದಾಗುತ್ತಾನೆ. ಜಾತಿ ಮತ್ತು ಕುಟುಂಬದ ಹಿನ್ನಲೆ ಕೇಳಿ ತಿಳಿದುಕೊಳ್ಳುತ್ತಾನೆ. ಯುವತಿಯರು ಹೇಳಿದ ಜಾತಿಗೆ ತಕ್ಕಂತೆ ತನ್ನ ಹೆಸರನ್ನು ಕೂಡ ಬದಲಾಯಿಸಿಕೊಳ್ಳುತ್ತಾನೆ. ಈ ರೀತಿ ತನಗೆ ಮದುವೆಯಾಗಿಲ್ಲ. ಹೆಣ್ಣಿನ ಹುಡುಕಾಟದಲ್ಲಿದ್ದೇನೆ ಎಂದು ನಂಬಿಕೆ ಹುಟ್ಟಿಸಿ, ವರದಕ್ಷಿಣೆ ಬೇಡ, ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಮದುವೆಯಾಗೋಣ ಎನ್ನುತ್ತಾನೆ. ಹಾಗೇ ಉಪಾಯದಿಂದ ಬೆಂಗಳೂರು, ಮೈಸೂರು, ಮಡಿಕೇರಿ, ಹಾಸನ, ಕೊಲ್ಲೂರು ಇತ್ಯಾದಿ ಕಡೆ ಕರೆದೊಯ್ದು, ಲಾಡ್ಜೊಂದರಲ್ಲಿ ರೂಮ್ ಮಾಡಿಕೊಂಡು ಉಪಾಯದಿಂದ ಲೈಂಗಿಕ ಸಂಪರ್ಕ ಬೆಳಸುತ್ತಾನೆ. ಬೆಳಗ್ಗೆ ಎದ್ದು ಬಸ್ ನಿಲ್ದಾಣದ ಪಕ್ಕದ ಶೌಚಾಲಯದ ಬಳಿ ಕರೆದೊಯ್ದು, ಈ ಮಾತ್ರೆ ತಿನ್ನು. ಇಲ್ಲದಿದ್ದರೆ ಗರ್ಭ ನಿಂತೀತು. ಮದುವೆಯಾದ ಬೆನ್ನಿಗೆ ಮಗು ಹುಟ್ಟಿದರೆ ಎಂಜಾಯ್ ಮಾಡಲು ಸಾಧ್ಯವಿಲ್ಲ ಎನ್ನುತ್ತಾ ಸಯನೈಡ್ ನೀಡುತ್ತಾನೆ. ಮಾತ್ರೆ ತಿಂದನಂತರ ಕನಿಷ್ಠ ೩ ನಿಮಿಷಗಳಲ್ಲಿ ಶೌಚಾಲಯದೊಳಗೆ ನಿಲ್ಲು ಎಂದೂ ಸಲಹೆ ನೀಡುತ್ತಾನೆ. ಹಾಗೇ ಗರ್ಭ ನಿರೋಧಕ ಮಾತ್ರೆ ಎಂದೇ ಬಗೆಯುವ ಅಮಾಯಕ ಯುವತಿಯರು ಅದನ್ನು ಸೇವಿಸಿದ ಕೆಲವೇ ನಿಮಿಷದಲ್ಲಿ ಶೌಚಾಲಯದೊಳಗೆ ಬಿದ್ದು ಸಾಯುತ್ತಾರೆ. ಕೆಲವರು ಹೊರಗೆ ಬಂದು ಸತ್ತದ್ದೂ ಇದೆ. ಅಷ್ಟರಲ್ಲೇ ಮೋಹನ್ ಕುಮಾರ್ ಲಾಡ್ಜ್‌ಗೆ ತೆರಳಿ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಾನೆ. ಪ್ರೇಮ ವೈಫಲ್ಯದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಸಾರ್ವಜನಿಕರು ಭಾವಿಸಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಗುರುತು ಪರಿಚಯವಿಲ್ಲದ ಯುವತಿಯರು ಹೇಳ ಹೆಸರಿಲ್ಲದೆ ಮಣ್ಣಾಗಿ ಬಿಡುತ್ತಾರೆ. ಎಲ್ಲ ಕೃತ್ಯಗಳನ್ನು ಮೋಹನ್ ಕುಮಾರ್ ಒಪ್ಪಿಕೊಂಡಿದ್ದು, ೧೮ ಮಂದಿಯ ಪೈಕಿಯ ೧೬ ಮಂದಿಯ ಹೆಸರನ್ನು ಉಲ್ಲೇಖಿಸಿದ್ದಾನೆ. ಕಾಸರಗೋಡು ಪ್ರದೇಶದ ಇಬ್ಬರು ಯುವತಿಯರ ಹೆಸರು ಇನ್ನೂ ಗೊತ್ತಾಗಿಲ್ಲ. ಈ ಎಲ್ಲ ಪ್ರಕರಣಗಳ ಮರು ತನಿಖೆ ನಡೆಸಿ ಆರೋಪಿಯ ಮೇಲೆ ಮಾನಭಂಗ ಮತ್ತು ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು. ೨೦೦೦ರಲ್ಲಿ ಮೋಹನ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಧರ್ಮಸ್ಥಳಕ್ಕೆ ಕರೆದೊಯ್ದು ನೇತ್ರಾವತಿ ನದಿಗೆ ತಳ್ಳುವ ಪ್ರಯತ್ನ ಮಾಡಿದ್ದನು. ಅದನ್ನು ಕಂಡ ಸಾರ್ವಜನಿಕರು ಆಕೆಯನ್ನು ಪಾರು ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರೂ ಕೂಡ ನ್ಯಾಯಾಲಯದಲ್ಲಿ ಅದು ಖುಲಾಸೆಗೊಂಡಿತ್ತು. ತದನಂತದ ಅಂದರೆ, ೨೦೦೫ರಿಂದ ಈತ ಸರಣಿ ಕೊಲೆ ಮಾಡುತ್ತಾ ಬಂದಿದ್ದಾನೆ ಎಂದು ಅವರು ವಿವರಿಸಿದರು.

ಯಾರೀತ???: ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ಮೋಹನ್ ಕುಮಾರ್ ಉಪ್ಪಿನಂಗಡಿಯಲ್ಲಿ ಪಿಯುಸಿ ಕಲಿತಿದ್ದ. ನಂತರ ತಾತ್ಕಾಲಿಕ ನೆಲೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸುಮಾರು ೨೩ ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದ. ೨೦೦೩ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಪಡೆದ ಈತ ಸರಣಿ ಕೊಲೆಯಲ್ಲಿ ತೊಡಗಿಸಿಕೊಂಡ. ಅದರ ಮಧ್ಯೆ ಉಪ್ಪಳ ಮತ್ತು ದೇರಳಕಟ್ಟೆಯ ಇಬ್ಬರನ್ನು ಮದುವೆಯಾಗಿದ್ದ. ಇಬ್ಬರು ಹೆಂಡತಿಯರಲ್ಲಿ ತಲಾ ೨ರಂತೆ ನಾಲ್ಕು ಮಕ್ಕಳ ತಂದೆಯಾಗಿದ್ದ. 


Share: