ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅರಣ್ಯ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಅತಿಕ್ರಮಣದಾರರ ಹೋರಾಟ ಸಮಿತಿ ಆಕ್ರೋಶ

ಭಟ್ಕಳ: ಅರಣ್ಯ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಅತಿಕ್ರಮಣದಾರರ ಹೋರಾಟ ಸಮಿತಿ ಆಕ್ರೋಶ

Fri, 05 Mar 2010 08:25:00  Office Staff   S.O. News Service

ಭಟ್ಕಳ, ಮಾರ್ಚ್ 4; ತಾಲೂಕಿನಲ್ಲಿ ಅರಣ್ಯಾಧಿಕಾರಿಗಳು ಅತಿಕ್ರಣದಾರರ ಮೇಲೆ ದೌರ್ಜನ್ಯಕ್ಕಿಳಿದಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಅಧಿಕಾರಿಗಳ ದೌರ್ಜನ್ಯದಿಂದಲೇ ವಾಸು ನಾಯ್ಕ ಎಂಬ ಯುವ ರೈತ ಮಾನಸಿಕವಾಗಿ ನೊಂದು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಅರಣ್ಯಾಧಿಕಾರಿಗಳು ಇದೇ ರೀತಿ ಅತಿಕ್ರಮಣದಾರರ ಮೇಲೆ ದೌರ್ಜನ್ಯ ಮುಂದುವರಿಸಿದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ. ಆಗ ಮುಂದಾಗುವ ಎಲ್ಲಾ ಅನಾಹುತಗಳಿಗೆ ಸಂಬಂಧಪಟ್ಟ ಇಲಾಖಾ‌ಅಧಿಕಾರಿಗಳೇ ಜವಾಬ್ದಾರರು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

 

ನಿನ್ನೆ ಬೆಳಿಗ್ಗೆ ಅರಣ್ಯಾಧಿಕಾರಿಗಳ ದೌರ್ಜನ್ಯಕ್ಕೆ ನೊಂದು ಆಸ್ಪತ್ರೆಗೆ ದಾಖಲಾದ ವಾಸು ನಾಯ್ಕನನ್ನು ಕಂಡು ಧೈರ್ಯ ತುಂಬಿದ ನಂತರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಭಟ್ಕಳದಲ್ಲಿ ಅರಣ್ಯಾಧಿಕಾರಿಗಳು ಸರ್ವಾಧಿಕಾರಿಗಳಂತೆ ಮೆರೆಯುತ್ತಿದ್ದು, ವಿನಾಕಾರಣ ಅತಿಕ್ರಮಣದಾರರಿಗೆ ಕಿರುಕುಳ ನೀಡುವುದು, ದೌರ್ಜನ್ಯ ಎಸಗುವುದು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಗೊದ್ದನಕೋಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ವಾಸು ನಾಯ್ಕ ಹಾಗೂ ವಿನಾಯಕ ಶೆಟ್ಟಿ ಬೆಳೆಸಿದ ತೋಟವನ್ನು ನಾಶಪಡಿಸುವುದರ ಮೂಲಕ ಅಧಿಕಾರಿಗಳು ತಮ್ಮ ದರ್ಪವನ್ನು ತೋರಿಸಿದ್ದಾರೆ. ಅರಣ್ಯಾಧಿಕಾರಿಗಳ ದೌರ್ಜನ್ಯದಿಂದ ಕಂಗಾಲಾದ ಯುವಕರು ಮಾನಸಿಕವಾಗಿ ತೀರಾ ನೊಂದಿದ್ದಾರೆ. ಇವರು ಕಷ್ಟಪಟ್ಟು ಬೆಳೆದ ಅಡಿಕೆ ತೋಟ ನಾಶವಾದ್ದರಿಂದ ಮಾನಸಿಕ ಜರ್ಝರಿತರಾಗಿದ್ದು, ಇವರಿಗೆ ಧೈರ್ಯ ತುಂಬಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಂದು ಗೊದ್ದನಕೋಡಿಯಲ್ಲಿ ತೋಟ ನಾಶ ಮಾಡುತ್ತಿದ್ದ ಸಂದರ್ಭದಲ್ಲಿ ಯುವಕರು ತಡೆದರೂ ಸಹ ಅವರಿಗೆ ಅಧಿಕಾರಿಗಳು ಮತ್ತು ಕೆಲವು ಸಿಬ್ಬಂದಿಗಳು ಮೊಬೈಲ ಕಸಿದುಕೊಂಡು ಜೀವಬೆದರಿಕೆ ಹಾಕಿದ್ದಾರೆ. ದೇಶದಲ್ಲಿ ಅರಣ್ಯ ಹಕ್ಕು ಕಾಯಿದೆ ಜಾರಿಯಲ್ಲಿರುವಾಗ ಹಾಗೂ ಅತಿಕ್ರಮಣದಾರರು ಸಕ್ರಮಗೊಳಿಸಿ ಎಂದು ನೀಡಿದ ಅರ್ಜಿಗಳು ಇತ್ಯರ್ಥವಾಗದೇ ಇರುವಾಗ ಅರಣ್ಯ ಇಲಾಖೆಗೆ ಅತಿಕ್ರಮಣದಾರರ ಒಕ್ಕಲೆಬ್ಬಿಸಲು ಯಾವುದೇ ಹಕ್ಕಿಲ್ಲ. ಮರಗಿಡಗಳನ್ನು ರಕ್ಷಿಸುವ ಅರಣ್ಯಾಧಿಕಾರಿಗಳೇ ಫಸಲು ಬಂದಿದ್ದ ಏಳು ನೂರಕ್ಕೂ ಅಧಿಕ ಬಾಳೆ ಹಾಗೂ ಅಡಿಕೆ ಮರಗಳನ್ನು ಕಡಿದು ಧ್ವಂಸ ಮಾಡಿರುವುದು ಸರಿಯೇ ಎಂದು ಖಾರವಾಗಿ ಪ್ರಶ್ನಿಸಿದ ಬೆಳಿಸಿದ ಗಿಡ ಮರಗಳನ್ನು ಕಡಿಯುವ ಹಕ್ಕು ಯಾರಿಗೂ ಇಲ್ಲ. ಜನರಿಗೊಂದ ನ್ಯಾಯ, ಅಧಿಕಾರಿಗಳಿಗೊಂದು ನ್ಯಾಯ ಸರಿಯಲ್ಲ. ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೇ ಹೊರತು, ಅಧಿಕಾರಿಶಾಹಿ ವ್ಯವಸ್ಥೆ ಇಲ್ಲ. ಯಾರೂ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಲೇಕು. ಹೀಗಾಗಿ ಅತಿಕ್ರಮಣದಾರರ ಮೇಲೆ ಜೀವಬೆದರಿಕೆ ಹಾಕಿ ದೌರ್ಜನ್ಯ ಎಸಗುವ ತಪ್ಪಿತಸ್ಥ ಅರಣ್ಯಾಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಭಟ್ಕಳದಲ್ಲಿ ಅರಣ್ಯ ಇಲಾಖಾಧಿಕಾರಿಗಳಿಂದ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ದು ವಿವರಿಸಲಾಗುತ್ತದೆ ಎಂದ ಅವರು ಯಾವುದೇ ಕಾರಣಕ್ಕೂ ಅತಿಕ್ರಮಣದಾರರು ಭಯಪಡುವ ಅಗತ್ಯವಿಲ್ಲ. ನಿಮ್ಮ ಪರವಾಗಿ ಯಾವುದೇ ಹೋರಾಟಕ್ಕೂ ಸಹ ಸಮಿತಿ ಸದಾ ಸಿದ್ದವಿದೆ ಎಂದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಾಷಾ, ಉಪಾಧ್ಯಕ್ಷರಾದ ಗಣಪತಿ ನಾಯ್ಕ, ಕೆ ಸುಲೇಮಾನ, ಚಂದ್ರು ನಾಯ್ಕ, ನಾಗೇಶ ದೇವಾಡಿಗ, ರಾಮಕೃಷ್ಣ ಶೆಟ್ಟಿ, ನಜೀರ ಕಾಶೀಂ ಜಿ, ಸಮೀಮಾ ಬಾನು, ರಾಜೇಶ ನಾಯ್ಕ,ವಿನಾಯಕ ಶೆಟ್ಟಿ, ಮಂಜು ಮೊಗೇರ ಮುಂತಾದವರು ಉಪಸ್ಥಿತರಿದ್ದರು.


Share: