ಬೆಂಗಳೂರು, ನ.೯: ‘ಸಿಜೆ ಡೌನ್-ಡೌನ್, ವಿ ವಾಂಟ್ ಜಸ್ಟಿಸ್ ಘೋಷಣೆಗಳು, ತಳ್ಳಾಟ, ವಾಗ್ವಾದ, ಕೈ ಮಿಲಾಯಿಸುವಿಕೆ, ಹಲ್ಲೆ, ಕುರ್ಚಿಗಳ ಎಸೆದಾಟ, ಸಿಳ್ಳೆ, ಚಪ್ಪಾಳೆ ಇವುಗಳ ಮಧ್ಯೆ ಕ್ರಾಂತಿಗತೆ, ವಕೀಲರಿಂದ ನ್ಯಾಯಮೂರ್ತಿಗಳ, ವಕೀಲರ ಮತ್ತು ಮಾಧ್ಯಮ ದವರ ಮೇಲೆ ಹಲ್ಲೆ, ಮಾಧ್ಯಮದವರ ಆಕ್ರೋಶ, ಪ್ರತಿಭಟನೆ ಇವು ಸೋಮವಾರ ರಾಜ್ಯ ಹೈಕೋರ್ಟ್‌ನಲ್ಲಿ ನಡೆದ ಘಟನೆಗಳು.
ಬೆಂಗಳೂರು ವಕೀಲರ ಸಂಘದ ‘ಒಂದು ದಿನದ ಕಲಾಪ ಬಹಿಷ್ಕಾರ’ ನಿರ್ಣಯದ ವಿರುದ್ದ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಸೇರಿದಂತೆ ಎಲ್ಲಾ ನ್ಯಾಯಮೂರ್ತಿ ಗಳು ಸೋಮುವಾರ ಬೆಳಿಗ್ಗೆ ಕಲಾಪ ನಡೆಸಲು ಮುಂದಾದ ಪರಿಣಾಮ ಪ್ರತಿಭಟನೆ ಗಿಳಿದ ವಕೀಲರು ಹೈಕೋರ್ಟ್ ಆವರಣವನ್ನು ರಣರಂಗವನ್ನಾಗಿ ಮಾಡಿದರು.
ಕಲಾಪ ಬಹಿಷ್ಕಾರಕ್ಕೆ ಬೆಂಗಳೂರು ವಕೀಲರ ಸಂಘ ನ. ೪ ರಂದು ತೆಗೆದುಕೊಂಡಿದ್ದ ನಿರ್ಣಯವನ್ನು ಪ್ರಶ್ನಿಸಿ ಎಂ.ಪಿ. ಗುಂಡಪ್ಪ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಶನಿವಾರ (ನ.೭) ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಮಂಜುಳಾ ಚೆಲ್ಲೂರು ನೇತೃತ್ವದ ವಿಭಾUಯ ಪೀಠ ‘ಕಲಾಪ ಬಹಿಷ್ಕಾರ’ಕ್ಕೆ ತಡೆಯಾಜ್ಞೆ ನೀಡಿತ್ತು.
ಎಂದಿನಂತೆ ಬೆಳಗ್ಗೆ ನ್ಯಾಯಾಲಯ ಕಲಾಪ ಪ್ರಾರಂಭವಾಗುತ್ತಿದಂತೆ ಸಂಘದ ಅಧ್ಯಕ್ಷ ಕೆ.ಎನ್. ಪುಟ್ಟೇಗೌಡ ನೇತೃತ್ವದಲ್ಲಿ ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ನುಗ್ಗಿದ ವಕೀಲರು ಸಿಜೆ ವಿರುದ್ದ ಘೋಷಣೆಗಳನ್ನು ಕೂಗುತ್ತ, ಕಲಾಪ ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದರು. ಕಲಾಪದಲ್ಲಿ ಭಾಗವಹಿಸಲು ಬಂದಿದ್ದ ವಕೀಲರ ಮೇಲೆ ಹಲ್ಲೆ, ಅವರನ್ನು ಕೋರ್ಟ್ ಸಭಾಂಗಣದಿಂದ ಬಲವಂತವಾಗಿ ಹೊರಹಾಕಲಾಯಿತು ಪ್ರತಿಭಟಿಸಿದ ವಕೀಲರ ಮೇಲ್ಲೆ ಹಲ್ಲೆ, ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತ ಸಿಜೆ ಎದುರಿಗೆ ಕುರ್ಚಿಗಳನ್ನು ಎಸೆಯಲು ಪ್ರಾರಂಭಿಸಿದರು.
ಕಲಾಪ ಸ್ಥಗಿತಗೊಳಿಸುವಂತೆ ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಪುಟೇಗೌಡ ಮುಖ್ಯ ನ್ಯಾಯಮೂರ್ತಿಗಳಲ್ಲಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ವಕೀಲರು ಗಲಾಟೆಯಲ್ಲಿ ತೊಡಗಿದ್ದರು. ಶಾಂತಿ ಕಾಪಾಡಿಕೊಳ್ಳುವಂತೆ ಸಿಜೆ ಎಷ್ಟು ಮನವಿ ಮಾಡಿದರೂ, ಯಾರು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.
‘ನಿಮ್ಮ (ವಕೀಲರ) ಬಗ್ಗೆ ನನಗೆ ಆಪಾರ ಗೌರವವಿದೆ, ನಾನು ಇಷ್ಟು ದಿನ ಮೌನ ವಾಗಿದ್ದೇನೆ ಎಂದರೆ ನನ್ನ ವಿರುದ್ದದ ಆರೋಪಗಳನ್ನು ಒಪ್ಪಿಕೊಂಡಿದ್ದೇನೆ ಎಂದರ್ಥ ಅಲ್ಲ. ಈಗಾಗಲೇ ನಾನು ಸ್ಪಷ್ಟೀಕರಣ ನೀಡಿದ್ದೇನೆ. ಕಲಾಪ ಸ್ಥಗಿತಗೊಳಿಸುವಂತೆ ಹೇಳುವ ಹಕ್ಕು ನಿಮಗಿಲ್ಲ. ನನ್ನ ಸಾಂವಿಧಾನಿಕ ಜವಾಬ್ದಾರಿ ನಾನು ನಿರ್ವಹಿಸುತ್ತಿದ್ದೇನೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ. ‘ನಾನು ನಿಮ್ಮವನೇ ನೀವೆ ಹೀಗೆ ನಡೆದುಕೊಂಡರೆ, ರಕ್ಷಣೆಗೆ ಬಾರದಿದ್ದರೆ ನಾನೆಲ್ಲಿ ಹೋಗಲಿ, ನನ್ನ ಅಭಿಪ್ರಾಯ ಕೇಳದೆ ನಿರ್ಣಯ ತೆಗೆದುಕೊಂಡಿದ್ದೀರಿ ಎಂದು ಏನೆಲ್ಲಾ ಹೇಳಿದರು ಯಾರು ಕೇಳದೆ ಇದ್ದಾಗ ಮುಖ್ಯ ನ್ಯಾಯಮೂರ್ತಿಗಳು ಪೀಠದಿಂದು ಎದ್ದು ಕಲಾಪವನ್ನು ತಾತ್ಕಾಲಿಕ ಸ್ಥಗಿತಗೊಳಿಸಿದರು.
ಮುಖ್ಯ ನ್ಯಾಯಮೂರ್ತಿಗಳು ಪೀಠದಿಂದ ನಿರ್ಗಮಿಸಿದ ನಂತರ ವಕೀಲರು ಉಳಿದ ಪೀಠಗಳಿಗೆ ತೆರಳಿ ಕಲಾಪ ಸ್ಥಗಿತಗೊಳಿಸುವಂತೆ ಒತ್ತಾಯಪಡಿಸಿದರು. ಕೆಲವರು ಒತ್ತಾಯಕ್ಕೆ ಮಣಿದು ಕಲಾಪ ಸ್ಥಗಿತಗೊಳಿಸಿದರು. ನ್ಯಾ. ಗೋಪಾಲ್ ಗೌಡ ಮತ್ತು ನ್ಯಾ. ಬಿ.ವಿ. ನಾಗರತ್ನ ಕಲಾಪ ಸ್ಥಗಿತಗೊಳಿಸಲು ನಿರಾಕರಿದ್ದಕ್ಕೆ ಪೀಠಕ್ಕೆ ನುಗ್ಗಿದ ವಕೀಲರು ಘೊಷಣೆ ಕೂಗುತ್ತ ನ್ಯಾ. ಗೋಪಾಲ್‌ಗೌಡರ ಮೇಲೆ ಒತ್ತಡ ತಂದರು.
ನ್ಯಾಯಮೂರ್ತಿಗಳು ಕೇಳದಿದ್ದಾಗ ಆಕ್ರೋಶಗೊಂಡ ವಕೀಲರು, ಅವಾಚ್ಯ ಪದಗಳಿಂದ ನಿಂದಿಸುತ್ತ, ಇಬ್ಬರು ನ್ಯಾಯಮೂರ್ತಿಗಳನ್ನು ಕೋರ್ಟ್ ಸಭಾಂಗಣದಲ್ಲಿ ಕೂಡಿ ಹಾಕಿ ಹೊರಗಿನಿಂದ ಬೀಗ ಜಡಿದರು.
ನ್ಯಾ.ಗೋಪಾಲ್ ಗೌಡರ ಮೇಲೆ ಹಲ್ಲೆ: ಸುಮಾರು ಹೊತ್ತು ಒಳಗೆ ಇದ್ದ ನ್ಯಾ. ಗೋಪಾಲ್ ಗೌಡ ಮತ್ತು ನ್ಯಾ. ಬಿ.ವಿ. ನಾಗರತ್ನರನ್ನು ಹೊರ ಕರೆತರಲು ಸ್ವತಃ ಮುಖ್ಯ ನ್ಯಾಯಮೂರ್ತಿಗಳು ಬಂದು ಅವರನ್ನು ಹೊರ ಕರೆ ತರುತ್ತಿರುವಾಗ ಈ ಸಂದರ್ಭದಲ್ಲಿ ಕೆಲವು ವಕೀಲರು ನ್ಯಾ. ಗೋಪಾಲ್ ಗೌಡರನ್ನು ಎಳೆದಾಡಿ ಅವರ ಮೇಲೆ ಹಲ್ಲೆ ನಡೆಸಿದರು.
ಮಾಧ್ಯಮದವರ ಮೇಲೆ ಹಲ್ಲೆ: ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ಗಲಾಟೆ ಬಗ್ಗೆ ವರದಿ ಮಾಡಲು ಬಂದಿದ್ದ ಕೆಲವು ಮಾಧ್ಯಮದವರ ಮೇಲೆ ‘ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದೀರಿ’ ಎಂದು ಇಂಗ್ಲೀಷ್ ಸುದ್ದಿವಾಹಿನಿಯ ಕ್ಯಾಮರಾ ಮೆನ್ ಮತ್ತು ಮಹಿಳಾ ಪತ್ರಕರ್ತೆಯ ಮೇಲೆ ವಕೀಲರು ಹಲ್ಲೆ ನಡೆಸಿದರು.
ಪ್ರತಿಭಟನೆ: ಪತ್ರಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ, ಛಾಯಾಗ್ರಾಹಕರು ಸೇರಿದಂತೆ ಕೆಲವು ಪತ್ರಕರ್ತರು ಹೈಕೋರ್ಟ್ ಮುಖ್ಯ ದ್ವಾರದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಸುರೇಶ್ ಕುಮಾರ್ ‘ಹಲ್ಲೆ ನಾಗರಿಕ ಸಮಾಜಕ್ಕೆ ಭೂಷಣವಲ್ಲ, ಪತ್ರಕರ್ತರು ಮತ್ತು ನ್ಯಾಯವಾದಿಗಳು ಇಬ್ಬರೂ ಗೌರಯುತ ಸ್ಥಾನದಲ್ಲಿದ್ದಾರೆ. ಪತ್ರಕರ್ತೆ ಮೇಲೆ ನಡೆದ ಹಲ್ಲೆ ದುರಾದೃಷ್ಟಕರ ಘಟನೆ. ಈ ಸಂಬಂಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಪತ್ರಕರ್ತ ಮತ್ತು ವಕೀಲರ ಸಂಘದ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತೇನೆ ಎಂದು ತಿಳಿಸಿದರು.
ಕ್ಷಮೆ ಕೇಳಿದ ಪುಟ್ಟೇಗೌಡ: ಮಾಧ್ಯಮದವರ ಮೇಲೆ ವಕೀಲರು ನಡೆಸಿದ ಹಲ್ಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ‘ ನಾವು ಯಾವತ್ತೂ ಪತ್ರಕರ್ತರ ಪರವಾಗಿ ಇದ್ದೇವೆ. ಪತ್ರಕರ್ತರನ್ನು ಗೌರವದಿಂದ ಕಾಣುತ್ತೇವೆ. ಇಂದು ನಡೆದ ಹಲ್ಲೆ ಅಚಾತುರ್ಯದ ಘಟನೆ ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದರು.
ರವಿವರ್ಮಾ ಕುಮಾರ್ ಖಂಡನೆ: ‘ಘಟನೆಯನ್ನು ಖಂಡಿಸಿದ ಹಿರಿಯ ವಕೀಲ ಪ್ರೂ.ರವಿವರ್ಮಾ ಕುಮಾರ್, ಇದೊಂದು ಖೇದಕರ ಘಟನೆ, ಇದರಿಂದ ನ್ಯಾಯಾಂಗಕ್ಕೆ ಕಪ್ಪು ಚುಕ್ಕೆ ಬಂದಿದೆ. ತಮ್ಮ ವೃತ್ತಿಗೆ ಘನತೆ, ಗೌರವ ತೋರಿ ಕಲಾಪಕ್ಕೆ ಹಾಜರಾದ ನ್ಯಾಯವಾದಿಗಳಿಗೆ ಕೃತಜ್ಞತೆ ಸಲ್ಲಸಿದ ಅವರು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಂಗವನ್ನು ತಮ್ಮ ಹಿಡಿದತದಲ್ಲಿಟ್ಟುಕೊಳ್ಳಲು ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಅಂಥವರಿಂದ ನ್ಯಾಯಾಂಗವನ್ನು ರಕ್ಷಿಸಲು ನಾವು ಮುಂದಾಗಬೇಕು ಎಂದರು