ಬೆಳಗಾವಿ/ಕಾರವಾರ:ಕರ್ನಾಟಕದಲ್ಲಿದ್ದುಕೊಂಡೇ ಪುಂಡಾಟ ಪ್ರದರ್ಶಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ರಾಜ್ಯೋತ್ಸವ ದಿನ ತನ್ನ ರಾಜ್ಯ ವಿರೋಧಿ ಧೋರಣೆ ಪ್ರದರ್ಶಿಸಿದೆ.
ನಗರದ ಹೊರವಲಯದ ಮಣ್ಣೂರಲ್ಲಿ ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಅಲ್ಲದೆ, ಬೆಳಗಾವಿ ನಗರದ ಕಟ್ಟಡವೊಂದರಲ್ಲಿ ಹಾಕಲಾಗಿದ್ದ ಕನ್ನಡ ಧ್ವಜ ಕಿತ್ತು ಹಾಕಲು ವಿಫಲ ಯತ್ನ ನಡೆಸಿದರು. ಇದು ಹೀಗಾದರೆ, ಕರಾಳ ದಿನಕ್ಕೆ ಕರೆ ನೀಡಿದ್ದ ಸಂಘಟನೆಯ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ! ಕಾರವಾರದಲ್ಲಿ ಎಂಇಎಸ್ ಸಂಘಟನೆ ಮಹಾರಾಷ್ಟ್ರ ಪರ ಘೋಷಣೆ ಕೂಗಿದವು.
ಧ್ವಜಕ್ಕೆ ಬೆಂಕಿ: ಬೆಳಗಾವಿ ನಗರದ ಹೊರವಲಯದ ಮಣ್ಣೂರು ಎಂಬಲ್ಲಿ ರಾಜ್ಯೋತ್ಸವ ನಿಮಿತ್ತ ಸಾರಿಗೆ ಸಂಸ್ಥೆಯೊಂದರ ಬಸ್‌ನಲ್ಲಿದ್ದ ಕನ್ನಡ ಬಾವುಟ ಇದ್ದ ಎಂಇಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಇಷ್ಟು ಮಾತ್ರವಲ್ಲದೆ, ಬಸ್‌ನಲ್ಲಿ ಬರೆಯಲಾಗಿದ್ದ ಕನ್ನಡ ಘೋಷಣೆಗಳನ್ನು ಅಳಿಸಿ, ಜೈ ಮಹಾರಾಷ್ಟ್ರ ಘೋಷಣೆ ಬರೆದರು. ವಾಹನದಲ್ಲಿ ಸಿಕ್ಕಿಸಿದ್ದ ಧ್ವಜ ಕಿತ್ತು ಭಗವಾಧ್ವಜ ಹಾರಿಸಿದರು. ಇದನ್ನು ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಪ್ರತಿಭಟಿಸಿದರು. ವಿದ್ಯಾರ್ಥಿಗಳು ಪುನಃ ಅದೇ ಬಸ್‌ನಲ್ಲಿ ಮಣ್ಣೂರು ಗ್ರಾಮ ಪ್ರವೇಶಿಸುವ ವೇಳೆ, ಭಗವಾಧ್ವಜ ಕಿತ್ತು ಕನ್ನಡ ಧ್ವಜ ಹಾಕಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಪುಂಡರು, ಬಸ್ ತಡೆದು ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಕನ್ನಡ ಧ್ವಜ ತುಳಿದು ಅದಕ್ಕೆ
ಬೆಂಕಿಯಿಟ್ಟರು.
ಈ ಕೃತ್ಯ ಪ್ರತಿಭಟಿಸಿ ಕಾಕತಿ ಠಾಣೆಗೆ ದೂರು ನೀಡಲು ಹೋದಾಗ ಅಲ್ಲಿ ದೂರು ಸ್ವೀಕರಿಲೂ ನಿರಾಕರಿಸಿದ್ದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲೂ ಹಿಂದೇಟು ಹಾಕಿದ್ದಾರೆ ಎಂದು ದೂರಿದ್ದಾರೆ.
ಧ್ವಜ ಕೀಳಲು ಯತ್ನ:ಬೆಳಗಾವಿ ನಗರದಲ್ಲಿ ಎಂಇಎಸ್ ಹೌಸಿಂಗ್ ಬೋರ್ಡ್ ಕಟ್ಟಡದಲ್ಲಿದ್ದ ಕನ್ನಡ ಧ್ವಜ ಕೀಳಲು ಯತ್ನಿಸಿದರು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು. ಇದರಿಂದ ವಿಚಲಿತರಾದ ಮರಾಠಿ ಪುಂಡರು ಕಲ್ಲು ತೂರಾಟ ನಡೆಸಿದರು.
ಈ ನಡುವೆ, ಎಂಇಎಸ್ ಕರೆ ನೀಡಿದ್ದ ಬೆಳಗಾವಿ ಬಂದ್‌ಗೆ ಯಾವ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಮರಾಠಿ ಭಾಷಿಕ ಪ್ರದೇಶದಲ್ಲೇ ಭರ್ಜರಿಯಾಗಿ ವ್ಯಾಪಾರ ವಹಿವಾಟು ನಡೆಯಿತು.
ಇಲ್ಲಿನ ಮರಾಠಾ ಮಂದಿರದಲ್ಲಿ ಕರಾಳ ದಿನಾಚರಣೆ ಆಚರಿಸಲು ಸಂಘಟನೆ ನಿರ್ಧರಿಸಿತ್ತು. ೨ ಗುಂಪುಗಳ ಪೈಕಿ ಮತ್ತೊಂದು ಗುಂಪು ಬಂದಿರಲಿಲ್ಲ. ಇದು ೨ ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಎಂಇಎಸ್‌ನ ೧ ಬಣ ಬೆಳಗಾವಿಯ ಶಿವಾಜಿ ಉದ್ಯಾನದಿಂದ ಮರಾಠಾ ಮಂದಿರ ವರೆಗೆ ಬೈಕ್ ರ್ಯಾಲಿ ನಡೆಸಿತು.
ಕಾರವಾರದಲ್ಲಿ:ಸದಾಶಿವಗಢದಲ್ಲಿರುವ ಮರಾಠಿ ಶಾಲೆಯಲ್ಲಿ ಸೇರಿದ್ದ ಹತ್ತಾರು ಮಂದಿ ರಾಜ್ಯ ವಿರೋಧಿ ಘೋಷಣೆ ಕೂಗಿದರು.
ಭಾನುವಾರ ಸಂಜೆ ೭ ರ ಸುಮಾರಿಗೆ ಅವರು ಈ ಸಭೆ ಆರಂಭಿಸಿದರು. ಕನ್ನಡ, ರಾಜ್ಯ ವಿರೋಧಿ ಘೋಷಣೆ ಕೂಗಿದರು. ಸುದ್ದಿ ತಿಳಿದು ಕನ್ನಡ ಪರ ಸಂಘಟನೆಗಳ ಮುಖಂಡರು ಅಲ್ಲಿಗೆ ಧಾವಿಸಿದರು. ಇದನ್ನು ಕಂಡು ಮಹಾರಾಷ್ಟ್ರ ಪರವಾಗಿ ಸಭೆ ನಡೆಸುತ್ತಿದ್ದವರು ಕಾಲ್ಕಿತ್ತರು. ಇದರ ವಿರುದ್ಧ ಚಿತ್ತಾಕುಲ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಮುಖಂಡರು ಕಪ್ಪು ಬಾವುಟ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದರು. ಅದನ್ನು ನಡೆಸದಂತೆ ಎಚ್ಚರಿಕೆಯನ್ನೂ ನೀಡಲಾಗಿತ್ತೆಂದು ತಿಳಿದುಬಂದಿದೆ.
ಸೌಜನ್ಯ: ಕನ್ನಡಪ್ರಭ