ಬೆಂಗಳೂರು,ಜನವರಿ ೨೮: ರಾಜ್ಯದಲ್ಲಿ ಚರ್ಚ್ಗಳ ಮೇಲೆ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಸರ್ಕಾರ ಮತಾಂತರ ಹಾಗೂ ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದು, ಸಂಘಪರಿವಾರದ ಕಾರ್ಯಸೂಚಿ ಜಾರಿಗೊಳಿಸಲು ಸದ್ದಿಲ್ಲದೇ ಕಾರ್ಯಪ್ರವೃತ್ತವಾಗಿದೆ.
ಫೆಬ್ರವರಿ ಕೊನೆಯವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಈ ಎರಡೂ ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧವಾಗಿದ್ದು, ಸಂಘಪರಿವಾರದ ಅಜೆಂಡಾ ಜಾರಿಗೆ ಉಭಯ ಸದನಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ.
ಶಿಕ್ಷಣವನ್ನು ಕೇಸರೀಕರಣ ಮಾಡುತ್ತಿರುವ ಬೆಳವಣಿಗೆಯ ನಡುವೆಯೇ ಈ ಎರಡೂ ಮಸೂದೆಗಳು ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮತೀಯ ಅಲ್ಪ ಸಂಖ್ಯಾತರ ಭಾವನೆಗಳಿಗೆ ಪರೋಕ್ಷವಾಗಿ ಧಕ್ಕೆ ತರುವ ವ್ಯವಸ್ಧಿತ ಸಂಚು ಇದರಲ್ಲಿ ಅಡಕವಾಗಿದೆ.
ಮತಾಂತರ ನಿಷೇಧ ಕಾಯ್ದೆಯಡಿ ಬಲವಂತವಾಗಿ ಮತಾಂತರ ಮಾಡಿದರೆ ಕನಿಷ್ಠ ಆರು ತಿಂಗಳ ಸೆರೆವಾಸ ವಿಧಿಸಲು ಉದ್ದೇಶಿದ್ದು, ಮಸೂದೆಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತಾದ ಕರಡು ಮಸೂದೆಯನ್ನು ಶಾಸನ ರಚನಾ ಸಮಿತಿ ಈಗಾಗಲೇ ಸಿದ್ಧಪಡಿಸಿದೆ.
ಮಧ್ಯಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಂತೆ ರಾಜ್ಯದಲ್ಲೂ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಒಲವು ತೋರಿದೆ. ಸಂಘಪರಿವಾರದ ಮುಖಂಡರ ಒತ್ತಾಯದ ಮೇರೆಗೆ ಬರುವ ಅಧಿವೇಶನದಲ್ಲಿ ಈ ಎರಡೂ ಮಸೂದೆಗಳು ಮಂಡನೆಯಾಗುವುದು ನಿಶ್ಚಿತ.
ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ದೂರು ನೀಡಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲು ಅವಕಾಶವಿದ್ದು, ಇದಕ್ಕೆ ಜೈಲು ಶಿಕ್ಷೆ ವಿಧಿಸಲು ಹೊಸ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಶಾಸನ ರಚನಾ ಸಮಿತಿ ಸಿದ್ಧಪಡಿಸಿರುವ ಮಸೂದೆ ಇದೀಗ ಗೃಹ ಇಲಾಖೆಯ ಪರಿಶೀಲನೆಯಲ್ಲಿದೆ. ಶಿಕ್ಷೆ ಮತ್ತಿತರ ವಿಚಾರಗಳನ್ನು ಮಸೂದೆಗೆ ಸೇರ್ಪಡೆಗೊಳಿಸುವ ಕೆಲಸದಲ್ಲಿ ನಿರತವಾಗಿದೆ.
ಇನ್ನು ಗೋಹತ್ಯಾ ನಿಷೇಧ ಮಸೂದೆಯೂ ಕೂಡ ಮಂಡನೆಯಾಗುತ್ತಿದ್ದು, ಈ ಕಾಯ್ದೆಯಡಿ ಗೋವು ಎಂದು ಸೇರಿಸಬೇಕೋ, ಜಾನುವಾರುಗಳು ಎಂದು ಸೇರ್ಪಡೆಮಾಡಬೇಕೋ ಎಂಬ ಜಿಜ್ಞಾಸೆಗೆ ಸರ್ಕಾರ ಸಿಲುಕಿದೆ.
ಗೋವು ಎಂದರೆ ಹಾಲು ಕರೆಯುವ ಹಸು ಎಂದಾಗುತ್ತದೆಯೇ ಅಥವಾ ಎಲ್ಲಾ ಜಾನುವಾರುಗಳು ಈ ವ್ಯಾಪ್ತಿಗೆ ಸೇರ್ಪಡೆಯಾಗುತ್ತದೆಯೇ ಎಂಬ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ.
ಜಾನುವಾರುಗಳು ಎಂದಾದರೆ ಅದು ಹಸು, ಎಮ್ಮೆ, ಹೋರಿಗಳು ಈ ವ್ಯಾಪ್ತಿಗೆ ಒಳಪಡುತ್ತದೆ. ಇವುಗಳ ಹತ್ಯೆ, ಸಾಗಾಟ ನಿಷೇಧ ಮಾಡಬೇಕಾಗುತ್ತದೆ. ನಿಜಕ್ಕೂ ಅದು ಸಾಧ್ಯವೇ ಎಂಬ ಪ್ರಶ್ನೆಯೂ ಕೂಡ ಸರ್ಕಾರದ ಮುಂದಿದೆ.
ಈ ಮಸೂದೆ ಪ್ರಕಾರ ಗೋಹತ್ಯೆ ಮಾಡುವುದು ಅಪರಾಧವಾಗುತ್ತದೆ. ಆದರೆ ಗೋವುಗಳನ್ನು ಮಾರಾಟ ಮಾಡುವವರಿಗೆ ಯಾವ ಶಿಕ್ಷೆ ವಿಧಿಸಲಾಗುತ್ತದೆ?. ಎಂಬ ಪ್ರಶ್ನೆ ಏಳುತ್ತದೆ.
ಗೋವು ಸಾಗಾಟ ಮಾಡುವುದು ಕೂಡ ಈ ಕಾಯ್ದೆಯಡಿ ಅಪರಾಧವಾಗಿದ್ದು, ಗೋವು ಸಾಗಾಟಕ್ಕೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಮಸೂದೆ ಜಾರಿಯಾದರೆ ಗೋವುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡುವುದು ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಡಲಿದೆ.
ಸಾಮಾನ್ಯವಾಗಿ ರೈತರು ಕೃಷಿ ಚಟುವಟಿಕೆಗಳಿಗೆ ಗೋವುಗಳನ್ನು ಸಾಗಾಟ ಮಾಡುತ್ತಾರೆ. ಕಾಯ್ದೆ ಜಾರಿಯಾದರೆ ಇನ್ನು ಮುಂದೆ ಕೃಷಿಕರು ಗೋವುಗಳ ಸಾಗಾಟಕ್ಕೆ ತಹಶೀಲ್ದಾರ್ಗಳಿಂದ ಪರವಾನಗಿ ಪಡೆಯಬೇಕಾತ್ತದೆ. ಆದರೆ ಎಲ್ಲಾ ಸಂದೇಹಗಳಿಗೆ ಸರ್ಕಾರ ಯಾವ ರೀತಿ ಸಮಜಾಯಿಷಿ ನೀಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ಒಂದೆಡೆ ಮುಸ್ಲಿಂ ಬಾಂಧವರು ಮತ್ತೊಂದು ಕಡೆ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರ ಈ ಎರಡೂ ಮಸೂದೆಗಳನ್ನು ಜಾರಿಗೆ ತರುತ್ತಿದ್ದು, ಇದು ವಿಧಾನಮಂಡಲ ಅಧಿವೇಶನದಲ್ಲಿ ಬಿರುಗಾಳಿ ಎಬ್ಬಿಸುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿವೆ.