ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ರೆಡ್ಡಿ ರಾಜಿಸೂತ್ರಕ್ಕೆ ಯಡ್ಡಿ ನಕಾರ ಮುಂದುವರಿದ ಹಗ್ಗ ಜಗ್ಗಾಟ: ಕಣ್ಣೀರು ಸುರಿಸಿದ ಯಡಿಯೂರಪ್ಪ; ರೆಡ್ಡಿ ಸಹೋದರರಿಂದ ಶೆಟ್ಟರ್ ಭೇಟಿ

ಬೆಂಗಳೂರು:ರೆಡ್ಡಿ ರಾಜಿಸೂತ್ರಕ್ಕೆ ಯಡ್ಡಿ ನಕಾರ ಮುಂದುವರಿದ ಹಗ್ಗ ಜಗ್ಗಾಟ: ಕಣ್ಣೀರು ಸುರಿಸಿದ ಯಡಿಯೂರಪ್ಪ; ರೆಡ್ಡಿ ಸಹೋದರರಿಂದ ಶೆಟ್ಟರ್ ಭೇಟಿ

Sun, 08 Nov 2009 02:40:00  Office Staff   S.O. News Service
ಬೆಂಗಳೂರು, ನ.7: ನಾಯಕತ್ವ ಬದಲಾವಣೆಯಾಗಲೇ ಬೇಕು ಇಲ್ಲವೇ, ಯಡಿಯೂರಪ್ಪ ಬಣದ ಆರು ಮಂದಿ ಸಚಿವರನ್ನು ಸಂಪುಟದಿಂದ ತಕ್ಷಣ ಕೈಬಿಡಬೇಕು ಎಂದು ಗಣಿಧಣಿಗಳು ಪಟ್ಟು ಹಿಡಿದಿದ್ದಾರೆ. ಇದಾದ ನಂತರವೂ ಆರು ತಿಂಗಳೊಳಗೆ ಯಡಿಯೂರಪ್ಪ ತನ್ನೆಲ್ಲಾ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ನಾಯಕತ್ವ ಬದಲಾವಣೆ ಶತಸಿದ್ಧ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಾಗಿದೆ.

ಕಳೆದ ೧೩ ದಿನಗಳಿಂದ ನಡೆಯುತ್ತಿರುವ ಬಿಜೆಪಿಯ ಆಂತರಿಕ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ನೀಡಲು ಪಕ್ಷದ ಹೈಕಮಾಂಡ್ ವಿಫಲವಾಗಿದೆ. ಕಳೆದ ನಾಲ್ಕು ದಿನಗಳಿಂದ ದಿಲ್ಲಿಯಲ್ಲಿ ಬೀಡುಬಿಟ್ಟಿರುವ ಯಡಿಯೂರಪ್ಪ ತಲೆ ದಂಡ ತಪ್ಪಿಸಿಕೊಳ್ಳಲು ವರಿಷ್ಠರೊಂದಿಗೆ ಚರ್ಚೆಯನ್ನು ಮುಂದುವರಿಸಿದ್ದಾರೆ. ಇಂದು ಬೆಳಗ್ಗೆ ಬಿಕ್ಕಟ್ಟು ಪರಿಹಾರವಾಗಿದೆ ಎಂದು ಹೇಳಿದ ಅವರು, ರಾತ್ರಿ ರಾಜ್ಯಕ್ಕೆ ಹಿಂದಿರುಗಿ ನೆರೆ ಸಂತ್ರಸ್ಥರ ಪುನರ್ವಸತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದ್ದರು.

ಯಡಿಯೂರಪ್ಪನವರ ನಾಯಕತ್ವ ಬದಲಾವಣೆಗೆ ಹಿಂಜೆರಿದಿರುವ ಬಿಜೆಪಿ ಹೈಕಮಾಂಡ್, ಬಂಡಾಯ ಸಾರಿರುವ ಗಣಿಧಣಿಗಳು ಮತ್ತು ಇತರ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಹೈಕಮಾಂಡ್‌ನಿಂದ ಸ್ಪಷ್ಟ ಸಂದೇಶ ದೊರೆಯಬಹುದು ಎಂದು ಇಂದು ಸಂಜೆಯ ವರೆಗೂ ನಿರೀಕ್ಷಿಸುತ್ತಿದ್ದ ಯಡಿಯೂರಪ್ಪ ಮತ್ತೊಂದು ದಿನ ದೆಲ್ಲಿಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಗಣಿಧಣಿಗಳೊಂದಿಗೆ ಗುರುತಿಸಿಕೊಂಡಿರುವ ಸಚಿವರು ಮತ್ತು ಶಾಸಕರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಹೈಕಮಾಂಡ್ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಹೇರಿದ ಒತ್ತಡಕ್ಕೆ ಕವಡೆ ಕಾಸಿನ ಬೆಲೆ ಸಿಕ್ಕಿಲ್ಲ. 

ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿಯವನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಮುಖಾಮುಖಿ ಚರ್ಚೆ ನಡೆಸುವ ಹೈಕಮಾಂಡ್‌ನ ಉದ್ದೇಶ ಈವರೆಗೆ ಈಡೇರಿಲ್ಲ. ನಿನ್ನೆ ದಿಲ್ಲಿಂದ ಹೈದರಾಬಾದ್‌ಗೆ ತೆರಳಿದ ಜನಾರ್ದನ ರೆಡ್ಡಿ ತಮ್ಮ ಆಪ್ತ ಬಣದ ಶಾಸಕರೊಂದಿಗೆ ಇಡೀ ರಾತ್ರಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಅವರು ನಾಯಕತ್ವ ಬದಲಾವಣೆಯಾಗಲೇ ಬೇಕು ಎಂದು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ಇಲ್ಲವಾದರೆ ಎರಡು ದಿನದಲ್ಲಿ ತಮ್ಮ ಬಣದ ಶಾಸಕರ ಅಭಿಪ್ರಾಯದಂತೆ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದಾರೆ. 

ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಒಪ್ಪದೆ ಇರುವುದರಿಂದ ಪರ್ಯಾಯವಾಗಿ ಆರು ಪ್ರಮುಖ ಬೇಡಿಕೆಗಳನ್ನು ಗಣಿಧಣಿಗಳು ಮುಂದಿಟ್ಟಿದ್ದಾರೆ. ಅದರಂತೆ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಿ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರನ್ನು ನೇಮಿಸುವುದು, ಜೊತೆಗೆ ಹಣಕಾಸು ಅಥವಾ ಗೃಹ ಖಾತೆಯ ಜವಾಬ್ದಾರಿ ವಹಿಸುವುದು. 

ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಆರು ಮಂದಿ ಸಚಿವರನ್ನು ಸಂಪುಟದಿಂದ ಕೈಬಿಡುವುದು. ಇತರ ಖಾತೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಶೋಭಾ ಕರಂದ್ಲಾಜೆ, ಧಾರವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್‌ರವರಿಗೆ ಪರ್ಯಾಯ ನಾಯಕರಾಗಿ ಬಿಂಬಿತವಾಗಿರುವ ಬಸವರಾಜ ಬೋಮ್ಮಾಯಿ, ಜೆಡಿ‌ಎಸ್‌ನಿಂದ ವಲಸೆ ಬಂದಿರುವ ಬಜ್ಜೇಗೌಡ, ಮುಖ್ಯಮಂತ್ರಿಗೆ ಆಪ್ತರಾಗಿರುವ ಮುರುಗೇಶ್ ನಿರಾಣಿ, ಲಕ್ಷ್ಮಣ್ ಸವದಿ, ಹರತಾಳ ಹಾಲಪ್ಪ, ಸಿ.ಎಂ.ಉದಾಸಿಯವರನ್ನು ತಕ್ಷಣದಿಂದ ಸಂಪುಟದಿಂದ ಕೈಬಿಡಬೇಕು. ಉದಾಸಿಯವರನ್ನು ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ನಿಯೋಜಿಸಬೇಕು ಎಂಬ ಬೇಡಿಕೆಗಳನ್ನು ಗಣಿಧಣಿಗಳು ಮಂಡಿಸಿದ್ದಾರೆ.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಸೋಲು ಕಂಡಿರುವ ವಸತಿ ಮತ್ತು ಮುಜರಾಯಿ ಖಾತೆಯ ಮಾಜಿ ಸಚಿವ ವಿ.ಸೋಮಣ್ಣರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಯತ್ನವನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಯಾವುದೇ ಕಾರಣಕ್ಕೂ ಸೋಮಣ್ಣರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಬಾರದು, ಅಷ್ಟೇ ಅಲ್ಲದೆ ವಸತಿ ಖಾತೆಯನ್ನು ಸಂಘ ಪರಿವಾರದಲ್ಲಿ ನಿಷ್ಠರಾಗಿ ದುಡಿದ ಕಾರ್ಯಕರ್ತರೊಬ್ಬರಿಗೆ ನೀಡಬೇಕು ಒತ್ತಾಯಿಸಲಾಗಿದೆ. ಯಡಿಯೂರಪ್ಪನವರ ಬಣದಿಂದ ತೆರವಾಗುವ ಸಚಿವ ಸ್ಥಾನಗಳಿಗೆ ಜಗದೀಶ್ ಶೆಟ್ಟರ್ ಬೆಂಬಲಿಗರಿಗೆ ಅವಕಾಶ ನೀಡಬೇಕು ಎಂದು ಗಣಿಧಣಿಗಳು ಪಟ್ಟು ಹಿಡಿದಿದ್ದಾರೆ.

ಹೈಕಮಾಂಡ್ ಮುಂದೆ ಮಂಡಿಸಿರುವ ಈ ಎಲ್ಲ ಬೇಡಿಕೆಗಳ ಕುರಿತು ಸಚಿವರಾದ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಇಂದು ಮಧ್ಯಾಹ್ನ ಜಗದೀಶ್ ಶೆಟ್ಟರನ್ನು ಭೇಟಿ ಮಾಡಿ ವಿವರಿಸಿದ್ದಾರೆ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಒಪ್ಪದೇ ಇರುವುದರಿಂದ ಇನ್ನಷ್ಟು ಕಠಿಣ ಬೇಡಿಕೆಗಳನ್ನು ಮುಂದಿಟ್ಟು ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸುವ ನಿರ್ಣಯವನ್ನು ಗಣಿಧಣಿಗಳು ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಗಣಿಧಣಿಗಳ ಕೆಲವು ಬೇಡಿಕೆಗಳಿಗೆ ಅಸ್ತು ಎಂದಿರುವ ಯಡಿಯೂರಪ್ಪ, ಆರು ತಿಂಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಮತ್ತು ಆರು ಮಂದಿ ಸಚಿವರನ್ನು ಸಂಪುಟದಿಂದ ಕೈಬಿಡಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಗಣಿಧಣಿಗಳ ಮೇಲಿನ ಎಲ್ಲ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಾಸ್ ಪಡೆಯಲಾಗುವುದು. ಬಿಜೆಪಿ ಹೈಕಮಾಂಡ್ ನೇತೃತ್ವದಲ್ಲೇ ಕೋರ್ ಕಮಿಟಿ ರಚನೆಗೆ ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ.

ಎಲ್ಲ ಬೇಡಿಕೆಗಳ ಈಡೇರಿಕೆ ಹೊರತಾಗಿ ಹೈದರಾಬಾದ್‌ನಲ್ಲಿ ತಂಗಿರುವ ಶಾಸಕರು ರಾಜ್ಯಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಗಣಿದಣಿಗಳು, ಒಂದು ವೇಳೆ ಹೈಕಮಾಂಡ್ ತಮ್ಮ ನಿಲುವು ಬದಲಿಸದಿದ್ದರೆ ಸುಮಾರು ೩೦ ಮಂದಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಯಡಿಯೂರಪ್ಪನವರಿಗೆ ನೀಡಿರುವ ಬೆಂಬಲವನ್ನು ವಾಪಾಸ್ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. 

ಕಣ್ಣೀರು ಸುರಿಸಿದ  ಯಡಿಯೂರಪ್ಪ
 
ಕುರ್ಚಿಯ ಆಸೆಗಾಗಿ ನನ್ನನ್ನೇ ನಂಬಿದ ಸಚಿವೆ ಶೋಭಾ ಕರಂದ್ಲಾಜೆ, ಐ‌ಎ‌ಎಸ್ ಅಧಿಕಾರಿ ವಿ.ಪಿ.ಬಳಿಗಾರ್‌ರನ್ನು ಕೈಬಿಟ್ಟು ತಪ್ಪು ಮಾಡಿದೆ. ಇದಕ್ಕಾಗಿ ದೇವರು ನನ್ನನ್ನು ಕ್ಷಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಣ್ಣಿರು ಹಾಕಿದ್ದಾರೆ.

ಹೊಸದಿಲ್ಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಬಿಕ್ಕಟ್ಟು ಬಹುತೇಕ ಇತ್ಯರ್ಥವಾಗಿದೆ. ನಾಳೆಯಿಂದ ರಾಜ್ಯಕ್ಕೆ ತೆರಳಿ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ಮೇಲೆ ನಂಬಿಕೆಯಿಟ್ಟು ನಾಯಕತ್ವ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿರುವ ಹೈಕಮಾಂಡ್‌ಗೆ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಕೃತಜ್ಞತೆ ಹೇಳಿದರು. ಮಾತಿನ ಉದ್ದಕ್ಕೂ ಗದ್ಗತಿತರಾಗಿದ ಯಡಿಯೂರಪ್ಪ ಒಂದು ಹಂತದಲ್ಲಿ ಕಣ್ಣಿರು ಹಾಕಿದರು. ನೆರೆಯಂತಹ ಸಂದರ್ಭದಲ್ಲಿ ಒಂದು ಕ್ಷಣವೂ ವ್ಯರ್ಥ ಮಾಡದೆ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದ್ದ ತಾವು ಕಳೆದ ೧೫ ದಿನಗಳಿಂದ ಪಕ್ಷದ ಆಂತರಿಕ ವಿಚಾರಗಳಲ್ಲಿ ಕಾಲಹರಣ ಮಾಡಿದ್ದಕ್ಕಾಗಿ ಜನರ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ತಮ್ಮಿಂದ ಸಾಧ್ಯವಾಗಿಲ್ಲ. ಈಗ ನನ್ನ ಸ್ವಾರ್ಥಕ್ಕಾಗಿ ನನ್ನನ್ನು ನಂಬಿದ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್‌ರನ್ನು ಕೈಬಿಟ್ಟಿದ್ದೇನೆ. ಜೀವನದಲ್ಲಿ ಅವರು ಎಂದಿಗೂ ನನ್ನನ್ನು ಕ್ಷಮಿಸುವುದಿಲ್ಲ. ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಹಿಂದೆಂದೂ ಯಾರು ಇಂತಹ ಕೆಲಸ ಮಾಡಿರಲಿಲ್ಲ. ಪಕ್ಷದ ಹಿರಿಯ ಆದೇಶ ಮತ್ತು ರಾಜ್ಯದ ಜನರ ಹಿತದೃಷ್ಠಿಯಿಂದ ನನಗೆ ಇಷ್ಟವಿಲ್ಲದಿದ್ದರೂ ಈ ಕೆಲಸ ಮಾಡಿದ್ದೇನೆ ಎಂದು ಅವರು ದುಖಿಃತರಾಗಿ ಹೇಳಿದರು.

ನಾಳೆಯಿಂದ ನೆರೆ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಪುನರ್ವಸತಿ ಕಾರ್ಯ ಕೈಗೊಳ್ಳುತ್ತೇನೆ. ಯಾರೊಬ್ಬರು ಹಸಿವಿನಿಂದ ನರಳಬಾರದು, ಮನೆಯಿಲ್ಲ, ಬಟ್ಟೆಯಿಲ್ಲ ಎಂದು ಕೊರಗಬಾರದು ಅಷ್ಟು ವ್ಯವಸ್ಥೆಗಳನ್ನು ಮಾಡಿಕೊಡುವ ವಿಶ್ವಾಸ ತಮಗಿದೆ. ರಾಜ್ಯದ ಅಭಿವೃದ್ದಿಗೆ ಇನ್ನಷ್ಟು ಹೆಚ್ಚು ಶಕ್ತಿ ನೀಡುವಂತೆ ದೇವರಲ್ಲಿ ಬೇಡುತ್ತೇನೆ ಎಂದು ಹೇಳಿ, ಜಮ್ಮುವಿನ ವೈಷ್ಣವದೇವಿ ದೇವಾಲಯಕ್ಕೆ ತೆರಳಿದರು.

ಶೋಭಾ ಬೆಂಬಲಿಗರ ಪ್ರತಿಭಟನೆ
 
ಬಿಜೆಪಿಯ ಆಂತರಿಕ ಬಂಡಾಯ ಶಮನಕ್ಕೆ ಶೋಭಾ ಕರಂದ್ಲಾಜೆಯವರ ತಲೆ ದಂಡ ಖಚಿತವಾದ ಬೆನ್ನಲ್ಲೆ ಅವರ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿರುವ ಸಚಿವೆ ಶೋಭಾ ಕರಂದ್ಲಾಜೆಯವರ ಮನೆ ಬಳಿ ಆಗಮಿಸಿದ ಯಶವಂತಪುರಕ್ಷೇತ್ರದ ಜನರು ಹಂತ ಹಂತವಾಗಿ ನಿರಂತರ ಪ್ರತಿಭಟನೆ ನಡೆಸಿದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಬಿಜೆಪಿ ಹೈಕಮಾಂಡ್ ಗಣಿಧಣಿಗಳನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಘೋಷಣೆಗಳನ್ನು ಕೂಗಿದ್ದಲ್ಲದೆ ಗಣಿಧಣಿಗಳಿಗೆ ದಿಕ್ಕಾರ ಕೂಗಿದರು. ಮಧ್ಯಾಹ್ನದ ವೇಳೆಗೆ ಮಹಿಳೆಯರ ದಂಡೆ ಆಗಮಿಸಿ ಗಣಿಧಣಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

ಇಷ್ಟೇಲ್ಲಾ ಬೆಳವಣಿಗಳ ನಂತರವೂ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳಲಿಲ್ಲ. ದಿಲ್ಲಿಯಲ್ಲಿ ಮುಖ್ಯಮಂತ್ರಿ ಶೋಭಾರನ್ನು ಸಂಪುಟದಿಂದ ಕೈಬಿಡುವುದಾಗಿ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದಾರೆ.

ಕಲಾಪ ಬಹಿಷ್ಕಾರಕ್ಕೆ ಹೈಕೋರ್ಟ್ ತಡೆ

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಕಲಾಪಕ್ಕೆ ಹಾಜರಾಗುತ್ತಿದ್ದನ್ನು ವಿರೋಧಿಸಿ, ಬೆಂಗಳೂರು ವಕೀಲರ ಸಂಘ ಅ.೯(ಸೋಮವಾರ)ರಂದು ನಡೆಸಲು ಉದ್ದೇಶಿಸಿದ್ಧ ಕಲಾಪ ಬಹಿಷ್ಕಾರಕ್ಕೆ  ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ರಾಜ್ಯದ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಕಲಾಪಕ್ಕೆ ಹಾಜರಾಗುತ್ತಿದ್ದನ್ನು ವಿರೋಧಿಸಿ, ಸೋಮುವಾರ (ನ.೯) ರಂದು ಕಲಾಪ ಬಹಿಷ್ಕರಿಸಬೇಕೆಂದು ಬೆಂಗಳೂರು ವಕೀಲರ ಸಂಘ ನಿರ್ಧಾರ ಕೈಗೊಂಡಿತ್ತು.
ಆದರೆ ಬೆಂಗಳೂರು ವಕೀಲರ ಸಂಘದ ‘ಕಲಾಪ ಬಹಿಷ್ಕಾರ’ ತೀರ್ಮಾನವನ್ನು ಪ್ರಶ್ನಿಸಿ ಎಂ.ಪಿ.ಗುಂಡಪ್ಪ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿದ್ದರು.  ಅಲ್ಲದೆ ನ.೯ರಂದು ಸಿವಿಲ್ ನ್ಯಾಯಾಲಯದಲ್ಲಿ ನನಗೆ ಸಂಬಂಧಪಟ್ಟ ಪ್ರಮುಖ ವ್ಯಾಜ್ಯದ ವಿಚಾರಣೆ ನಡೆಯಬೇಕಾಗಿದೆ. ಕಲಾಪ ಬಹಿಷ್ಕಾರದಿಂದ ನನಗೆ ತೊಂದರೆಯಾಗಲಿದೆ. ಅಲ್ಲದೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಕೀಲರು ಕಲಾಪ ಬಹಿಷ್ಕಾರ ಮಾಡುವಂತಿಲ್ಲ. ಇದರಿಂದ ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ವಾದಿಸಿದ್ದರು.

ಅರ್ಜಿ ಕುರಿತು ಕಳೆದ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಿತ್ ಗುಂಜಾಳ್, ಈ ವಿಷಯ ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಗೊಳಪಡುತ್ತದೆ. ಆದ್ದರಿಂದ ವಿಷಯವನ್ನು ವಿಭಾUಯ ಪೀಠದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿ, ಪ್ರಕರಣವನ್ನು ವಿಭಾUಯ ಪೀಠಕ್ಕೆ ವರ್ಗಾಯಿಸಿದ್ದರು.

ನ್ಯಾಯಮೂರ್ತಿ ಮಂಜುಳ ಚೆಲ್ಲೂರು ಹಾಗೂ ಬಿ.ವಿ.ನಾಗರತ್ನರನ್ನು ಒಳಗೊಂಡ ವಿಭಾUಯ ಪೀಠ ಶನಿವಾರ ಕಲಾಪ ಬಹಿಷ್ಕಾರ ಕುರಿತ ಸಲ್ಲಿಸಿದ್ಧ ಅರ್ಜಿ ವಿಚಾರಣೆ ನಡೆಸಿತು. ಅಲ್ಲದೆ ಕಲಾಪ ಬಹಿಷ್ಕಾರಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿತು.

ಶನಿವಾರ ಸಂಜೆಯವರೆಗೂ ವಿಚಾರಣೆ ನಡೆಸಿದ ವಿಭಾUಯ ಪೀಠ, ಕಲಾಪ ಬಹಿಷ್ಕರಿಸಬೇಕೆಂಬ ವಕೀಲರ ಸಂಘದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಪಿ.ಡಿ.ದಿನಕರನ್‌ರ ಅಕ್ರಮ ಆಸ್ತಿಗಳಿಗೆ ಆರೋಪ ಸಾಭೀತಾಗುವುದಕ್ಕೂ ಮೊದಲು, ಈ ವಿಚಾರವನ್ನು ವೈಭಕರಿಸುವ ಅವಶ್ಯಕತೆಯಾದರೂ ಏನಿದೆ ಎಂದು ನ್ಯಾಯಾದೀಶರನ್ನು ವಿಭಾUಯ ಪೀಠ ವಿಚಾರಣೆಯ ಸಂದರ್ಭದಲ್ಲಿ ಪ್ರಶ್ನಿಸಿತು. 

ಸುಪ್ರಿಂಕೋರ್ಟ್‌ನ ನ್ಯಾಯಾಧೀಶರ ಸಮಿತಿ(ಕೊಲಿಜಿರಿ) ದಿನಕರನ್ ಮೇಲಿನ ಆರೋಪಗಳನ್ನು ಎತ್ತಿಹಿಡಿದಿಲ್ಲ. ಅಲ್ಲದೆ ಅವರ ವಿರುದ್ಧವೂ ಯಾವುದೆ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ಈ ವಿಚಾರವನ್ನು ವೈಭಕರಿಸುವ ಅವಶ್ಯಕತೆ ಇಲ್ಲ ಎಂದು ನ್ಯಾಯಾದೀಶರ ವಿರುದ್ಧ ವಿಭಾUಯ ಪೀಠ ಕಿಡಿಕಾರಿತು.

ಪ್ರತಿಯೊಂದು ವೃಂದಕ್ಕು ಸಂಘಟನೆ ಇದೆ. ಅಲ್ಲದೆ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸುವ ಹಕ್ಕು ಇದೆ. ಆದರೆ ಇಂತಹ ಹಕ್ಕು ನ್ಯಾಯಾಧೀಶರಿಗೆ ಇಲ್ಲ. ದಿನಕರನ್ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳ ಆಧಾರದ ಮೇಲೆ ಕಲಾಪ ಬಹಿಷ್ಕರಿಸುವುದು ಸರಿಯಲ್ಲ. ಜನತೆಯ ಊಹಾಪೋಹಗಳಿಗೆ ನಾವು ಸ್ಪಷ್ಟೀಕರಣ ನೀಡುವ ಪರಿಸ್ಥಿತಿ ಇಲ್ಲ ಎಂದು ವಿಶೇಷ ಪೀಠ ಆಕ್ರೋಶ ವ್ಯಕ್ತಪಡಿಸಿದೆ.

ಜನತೆಗೆ ನ್ಯಾಯಧಾನ ಮಾಡುವ ನ್ಯಾಯಾಧೀಶರಿಗೆ ಅನ್ಯಾಯವಾದಾಗ ಅವರು ಅಸಹಾಯಕರಾಗುತ್ತಾರೆ. ಇಂತಹ ನಿರ್ಣಯಗಳನ್ನು ನ್ಯಾಯಾಧೀಶರು ಕೈಗೊಳ್ಳುವ ಹಕ್ಕಿಲ್ಲ ಎಂದು ವಿಭಾUಯ ಪೀಠ ಹೇಳಿತಲ್ಲದೆ, ಕಲಾಪ ಬಹಿಷ್ಕಾರಕ್ಕೆ ತಡೆಯಾಜ್ಞೆ ನೀಡಿತು.

ರೆಡ್ಡಿ ಸಹೋದರರಿಂದ ಶೆಟ್ಟರ್ ಭೇಟಿ

ಬಿಜೆಪಿ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿರುವ ಬೆನ್ನಲ್ಲೆ ಗಣಿಧಣಿಗಳು ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರನ್ನು ಭೇಟಿ ಮಾಡಿ ಸುಮಾರು ೨ ಗಂಟೆ ಸುದೀರ್ಘ ಮಾತುಕತೆ ನಡೆಸಿದರು.

ನಾಲ್ಕು ದಿನಗಳಿಂದ ದಿಲ್ಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿ, ನಿನ್ನೆ ಹೈದರಾಬಾದ್‌ನಲ್ಲಿ ತಂಗಿರುವ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಇಂದು ಮಧ್ಯಾಹ್ನ ಜನಾರ್ದನರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಜಗದೀಶ್ ಶೆಟ್ಟರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದರು.

ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕರುಣಾಕರ ರೆಡ್ಡಿ, ಇದೊಂದು ಸೌಜನ್ಯದ ಭೇಟಿಯಷ್ಠೆ ರಾಜಕೀಯವನ್ನು ತಮ್ಮ ಮನೆಯ ಬಳಿ ಮಾತನಾಡುತ್ತೇವೆ ಎಂದು ಹೇಳಿದರು.

ಇನ್ನೊಮ್ಮೆ ಆಪ್ತ ಬಳಗದೊಂದಿಗೆ ಚರ್ಚಿಸಿ ಸಂಜೆ ೫ ಗಂಟೆಗೆ ಸ್ಪಷ್ಟ ನಿಲುವು ಹೇಳುತ್ತೇವೆ ಎಂದು ತಿಳಿಸಿದ್ದ ಗಣಿಧಣಿಗಳು ಮಧ್ಯಾಹ್ನದ ನಂತರ ತಮ್ಮ ಭದ್ರತಾ ಸಿಬ್ಬಂದಿಯನ್ನೂ ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದರು. ಸಂಜೆ ೬ ಗಂಟೆ, ರಾತ್ರಿ ೭ ಗಂಟೆ ಎಂದು ಪತ್ರಿಕಾಗೋಷ್ಠಿಯನ್ನು ಪ್ರತಿ ಗಂಟೆಗೊಮ್ಮೆ ಮುಂದೂಡಿ, ಅಂತಿಮವಾಗಿ ಹೈಕಮಾಂಡ್ ನಿಲುವು ತಿಳಿದುಕೊಳ್ಳುವವರೆಗೂ ಪತ್ರಕರ್ತರೊಂದಿಗೆ ಮಾತನಾಡುವುದಿಲ್ಲ ಎಂಬ ಸಂದೇಶ ರವಾನಿಸಿದರು. ರಾತ್ರಿ ೮ ಗಂಟೆಗೆ ಜನಾರ್ದನ ರೆಡ್ಡಿ ದಿಲ್ಲಿಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.

ಸಚಿವರನ್ನು ಭೇಟಿ ಮಾಡುವ ಮೊದಲು ಸುದ್ದಿಗಾರರೊಂದಿಗೆ ಔಪಚಾರಿಕವಾಗಿ ಮಾತನಾಡಿದ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್, ತಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ. ಹೈಕಮಾಂಡ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು. ತಾವು ಈವರೆಗೂ ವಿಧಾನಸಭಾಧ್ಯಕ್ಷರಾಗಿರುವುದರಿಂದ ರಾಜಕೀಯ ಕುರಿತು ಹೆಚ್ಚು ಚರ್ಚೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನೆರಡು ದಿನಗಳಲ್ಲಿ ಹೈಕಮಾಂಡ್ ನಿರ್ಧಾರ: ರೆಡ್ಡಿ

ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಇನ್ನೆರಡು ದಿನಗಳಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ. ಇಲ್ಲವಾದರೆ ತಾವು ಮುಂದಿನ ನಿರ್ಧಾರಗಳನ್ನು ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದು ಬಂಡಾಯ ಶಾಸಕರ ನಾಯಕರಾದ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಬೆಳಗ್ಗೆ ೧೦.೩೦ಕ್ಕೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ ಅವರು, ಕೆಟ್ಟಗ್ರಹಗಳನ್ನು ಸುತ್ತಲೂ ಇಟ್ಟುಕೊಂಡಿರುವ ಯಜಮಾನ ಮುಂದುವರಿಯಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನೆರೆ ಪೀಡಿತ ಜಿಲ್ಲೆಗಳಾದ ಗದಗ, ಬಳ್ಳಾರಿಯಲ್ಲಿ ಗಣಿಮಾಲಕ ಸಹಯೋಗದೊಂದಿಗೆ ಮನೆಗಳನ್ನು ನಿರ್ಮಿಸಿಕೊಡುತ್ತೇವೆ ಎಂದು ತಾವು ಹೇಳಿದಾಗ, ತಮ್ಮ ಜನಪ್ರಿಯತೆ ಸಹಿಸದೆ ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಇದರಿಂದ ತಮ್ಮೆಲ್ಲರ ಮನಸಿಗೆ ತುಂಬಾ ನೋವಾಗಿದ್ದು, ನಾಯಕತ್ವ ಬದಲಾಗದ ಹೊರತು ಬೇರೆ ಯಾವ ಬೇಡಿಕೆಗಳು ತಮ್ಮ ಮುಂದಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದರು.

Share: