ಭಟ್ಕಳ, ಅಕ್ಟೋಬರ್ 21: ಅನಧಿಕೃತ ಸಾರಾಯಿ ಮಾರಾಟದ ವಿರುದ್ಧ ಹೋರಾಟವನ್ನು ಮುಂದುವರೆಸಿರುವ ಭಟ್ಕಳ ಮಾವಿನಕುರ್ವೆ ಮಹಿಳೆಯರು, ಕಾನೂನು ಬಾಹೀರವಾಗಿ ಸಾರಾಯಿ ಮಾರಾಟದಲ್ಲಿ ತೊಡಗಿದ್ದನೆನ್ನಲಾದ ವ್ಯಕ್ತಿಯ ತಲೆಯ ಮೇಲೆ ಸಾರಾಯಿ ಬಾಟಲುಗಳನ್ನು ಇಟ್ಟು ಮೆರವಣಿಗೆ ನಡೆಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಕಳೆದ ಕೆಲವು ತಿಂಗಳುಗಳಿಂದ ಅನಧಿಕೃತ ಸಾರಾಯಿ ಮಾರಾಟದ ವಿರುದ್ಧ ಸೆಡ್ಡು ಹೊಡೆದಿರುವ ಇಲ್ಲಿಯ ಮಹಿಳೆಯರು, ಅಂಗಡಿ ಹಾಗೂ ಮನೆಯಲ್ಲಿ ಕದ್ದು ಮುಚ್ಚಿ ಮಾರುತ್ತಿದ್ದನೆನ್ನಲಾದ ಅದೇ ಊರಿನ ನಾಗೇಶ ನಾಗಪ್ಪ ನಾಯ್ಕ ಎಂಬುವವನ ಮನೆಯ ಮೇಲೆ ದಾಳಿ ನಡೆಸಿ ಸಾರಾಯಿ ಬಾಟಲುಗಳನ್ನು ಹುಡುಕಿ ತಂದರು. ಅಷ್ಟಕ್ಕೂ ತೃಪ್ತರಾಗದ ಅವರು ಸಾರಾಯಿ ಬಾಟಲುಗಳನ್ನು ಬಾಕ್ಸುಗಳಲ್ಲಿ ತುಂಬಿ ಆತನ ತಲೆಯ ಮೇಲಿಟ್ಟು ಬಂದರಿನವೆರೆಗೆ ಮೆರವಣಿಗೆ ನಡೆಸಿದರು. ಇವರೊಂದಿಗೆ ಸ್ಥಳೀಯ ಯುವಕರೂ ಸೇರಿಕೊಂಡು ಪಟಾಕಿ ಸಿಡಿಸಿ ಮಹಿಳೆಯರಿಗೆ ಬೆಂಬಲವನ್ನು ಸೂಚಿಸಿದರು. ಸಾರಾಯಿ ವಿರೋಧಿ ಘೋಷಣೆಗಳು ಮೆರವಣಿಗೆಯುದ್ಧಕ್ಕೂ ಮೊಳಗಿದವು. ನಂತರ ಬಂದರಿನಲ್ಲಿರುವ ಆತನ ಅಂಗಡಿಯ ಮೇಲೆಯೂ ಮಹಿಳೆಯರು ಮುಗಿ ಬಿದ್ದು ಪ್ರತಿಭಟನೆ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಲಕ್ಷಣ ತೋರುತ್ತಿದ್ದಂತೆಯೇ ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಲು ಪ್ರಯತ್ನಿಸಿದರು. ಭಟ್ಕಳ ಗ್ರಾಮೀಣ ಠಾಣಾ ಎಸೈ ಪಟೇದ್ ಸಿಬ್ಬಂದಿಗಳೊಡನೆ ಸ್ಥಳದಲ್ಲಿ ಉಪಸ್ಥಿತರಿದ್ದು, ಆಕ್ರೋಶಿತ ಮಹಿಳೆಯರನ್ನು ಸಮಾಧಾನಗೊಳಿಸಿದರು. ಆರೋಪಿ ನಾಗೇಶ ನಾಗಪ್ಪ ನಾಯ್ಕ ಹಾಗೂ ಆತನ ಪತ್ನಿ ಪದ್ಮಾವತಿ ನಾಯ್ಕ ವಿರುದ್ಧ ಸಾರಾಯಿ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


ಅಬಕಾರಿ ವಿರುದ್ಧ ಮತ್ತೆ ಆಕ್ರೋಶ: ಸಾರಾಯಿ ಮಾರಾಟದ ವಿರುದ್ಧ ತಮ್ಮ ಹೋರಾಟ ಮುಂದುವರೆದಿದ್ದರೂ, ಸ್ಥಳೀಯ ಅಬಕಾರಿ ಅಧಿಕಾರಿ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಾಜ ಅನಿಷ್ಠದ ವಿರುದ್ಧ ಸಂಹಾರಕ್ಕಾಗಿ ಜನರೇ ಮುಂದಾಗಿದ್ದರೂ, ಅಬಕಾರಿ ಅಧಿಕಾರಿಗಳು ಕನಿಷ್ಟ ಸ್ಥಳಕ್ಕೆ ಭೇಟಿ ನೀಡುವ ಸೌಜನ್ಯವನ್ನೂ ತೋರುತ್ತಿಲ್ಲ ಎಂದು ಅವರು ಆರೋಪಗಳ ಸುರಿಮಳೆಗರೆದರು. ಈ ಭಾಗದ ಇನ್ನೂ ಕೆಲೆವೆಡೆ ಅನಧಿಕೃತ ಸಾರಾಯಿ ಮಾರಾಟದ ಬಗ್ಗೆ ಸುಳಿವು ಇದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರೆ ಈ ತೆರನಾದ ತಮ್ಮ ಹೋರಾಟ ಮುಂದುವರೆಯುತ್ತದೆ. ಮುಂದೆ ಸಂಭವಿಸಬಹುದಾದ ಎಲ್ಲ ಅವಗಢಕ್ಕೂ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.