ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನೆರೆಸಂತ್ರಸ್ತರಿಗೆ ಮನೆಕಟ್ಟಿಕೊಡಲು ಟಾರ್ಶ್ ದತ್ತಕ ಸಂಸ್ತೆ ಒಲವು

ಬೆಂಗಳೂರು: ನೆರೆಸಂತ್ರಸ್ತರಿಗೆ ಮನೆಕಟ್ಟಿಕೊಡಲು ಟಾರ್ಶ್ ದತ್ತಕ ಸಂಸ್ತೆ ಒಲವು

Fri, 16 Oct 2009 07:27:00  Office Staff   S.O. News Service
ಬೆಂಗಳೂರು, ಅ.15: ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆ ಹಾವಳಿಯಿಂದ ತಮ್ಮ ಜೀವ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಸುಮಾರು 52 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಟಾರ್ಶ್ ಚಾರಿಟೆಬಲ್ ಟ್ರಸ್ಟ್ ಮುಂದೆ ಬಂದಿದೆ.

ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಅಬ್ದುಲ್ ಅಝೀಮ್ ಮನೆಗಳ ನಿರ್ಮಾಣ ಕಾಮಗಾರಿಯ ನೇರ ಉಸ್ತುವಾರಿ ವಹಿಸಲಿದ್ದಾರೆ. ಸರಕಾರ ಗುರುತಿಸಿದ ಗ್ರಾಮವೊಂದರಲ್ಲಿ ೫೨ ಮನೆಗಳನ್ನು ನಿರ್ಮಿಸಿ ಮುಸ್ಲಿಂ, ಹಿಂದು, ಕ್ರಿಶ್ಚಿಯನ್ ಸಮುದಾಯದ ಕುಟುಂಬಗಳಿಗೆ ಸಮನಾಗಿ ಹಂಚಿಕೆ ಮಾಡಲಾಗುವುದು. ಈ ಮೂಲಕ ಸೌಹಾರ್ದದ ಸಂದೇಶ ಸಾರಲು ನಿರ್ಧರಿಸಲಾಗಿದೆ ಎಂದು ಅಝೀಂ ತಿಳಿಸಿದ್ದಾರೆ.

ಜಿದ್ದಾದಲ್ಲಿರುವ ಟ್ರಸ್ಟ್‌ನ ಸಂಸ್ಥಾಪಕ ತಮೀಮ್ ಅಹ್ಮದ್‌ರ ನೆರವಿನಲ್ಲಿ ೫೨ ಮನೆಗಳನ್ನು ನಿರ್ಮಿಸಲಾಗುವುದು. ಈ ಎಲ್ಲ ಮನೆಗಳನ್ನು ಸೇರಿಸಿ ಒಂದು ಪ್ರತ್ಯೇಕ ಬಡಾವಣೆ ನಿರ್ಮಿಸುವ ಜೊತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರಿನ ವ್ಯವಸ್ಥೆ, ಶೌಚಾಲಯಗಳು ಮತ್ತು  ಸಮುದಾಯ ಭವನ ನಿರ್ಮಿಸುವ ಉದ್ದೇಶ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

ಈ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿ‌ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿರುವ ಅವರು, ನೆರೆ ಹಾವಳಿಗೆ ತುತ್ತಾಗಿರುವ ಜಿಲ್ಲೆಗಳ ಪೈಕಿ ಅತೀ ಹೆಚ್ಚಿನ ಹಾನಿ ಸಂಭವಿಸಿರುವ ಗ್ರಾಮ ಹಾಗೂ ಸಂತ್ರಸ್ತರನ್ನು ಗುರುತಿಸಿ ಈ ಸಂಬಂಧ ರಾಜ್ಯ ಸರಕಾರಕ್ಕೆ ಪತ್ರ ಬರೆದು ಕನಿಷ್ಠ ಎರಡು ಎಕರೆ ಜಮೀನನ್ನು ಈ ಮೇಲಿನ ಉದ್ದೇಶಕ್ಕಾಗಿ ಮಂಜೂರು ಮಾಡಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ತಮ್ಮ ಕುಟುಂಬ ವರ್ಗದವರಿಂದ ನಡೆಸಲಾಗುತ್ತಿರುವ ಟಾರ್ಶ್ ಚಾರಿಟೆಬಲ್ ಟ್ರಸ್ಟ್ ನೆರೆ ಸಂತ್ರಸ್ತರಿಗಾಗಿ ಅಗತ್ಯ ಸೇವೆ ಮಾಡಲು ಉತ್ಸುಕವಾಗಿದ್ದು, ಸರಕಾರದ ಅನುಮೋದನೆ ಸಿಕ್ಕಿದ ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು. 
ಈ ಮೊದಲು ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದಾಗ ಸೂರತ್‌ನಲ್ಲಿ ಗ್ರಾಮವೊಂದನ್ನು ದತ್ತು ಪಡೆದು ಸಂಪೂರ್ಣ ಅಭಿವೃದ್ಧಿ ಮಾಡಿರುವುದಾಗಿಯೂ ಅಬ್ದುಲ್ ಅಝೀಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Share: