ಕಾರವಾರ,ಫೆಬ್ರವರಿ 17:ಕನ್ನಡ ಮತ್ತು ಸಂಸ್ಸೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಆಲೋಚನಾ ವೇದಿಕೆ ಸಹಯೋಗದೊಂದಿಗೆ ಫೆಬ್ರವರಿ 21 ರಂದು ಹೊನ್ನಾವರದ ಪ್ರತಿಭೋದಯ (ಶರಾವತಿ ಕಲಾಮಂದಿರ) ದಲ್ಲಿ ರಾಜ್ಯ ಸರ್ಕಾರದ ವಿಶೇಷ ಘಟಕ ಯೋಜನೆಯಡಿ ಗಿರಿಜನ ಸಾಂಸ್ಕೃತಿಕ ಸಮಾವೇಶವನ್ನು ಏರ್ಪಡಿಸಲಾಗಿದೆ.
ಈ ಸಮಾವೇಶವನ್ನು ಹೊನ್ನಾವರ ಶಾಸಕ ದಿನಕರ ಕೆ. ಶೆಟ್ಟಿ ಉದ್ಫಾಟಿಸಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಅಂದೇ ಮಧ್ಯಾಹ್ನ 12.30 ಗಂಟೆಗೆ ನಡೆಯಲಿರುವ ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ ಕಾಳೇಗೌಡ ಅವರು ವಹಿಸಲಿದ್ದು 3.30 ಗಂಟೆಗೆ ಮೈಸೂರಿನ ಡಾ ಕೃಷ್ಣಮೂರ್ತಿ ಹನೂರು ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಜೆ ೬.೦೦ ಗಂಟೆಯಿಂದ ವಿವಿಧ ಜಾನಪದ ಕಲಾ ಪ್ರದರ್ಶನಗಳಾದ ಅಗೇರರ ವಾದ್ಯ, ಗೊಂಡರಹೋಳಿ ಕುಣಿತ, ಹಾಲಕ್ಕಿ ತಾರ್ಲೆ ಕುಣಿತ, ಸಿದ್ಧಿಯರ ಢಮಾಮಿ ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಮುಕ್ರಿ ಸುಗ್ಗಿ ಕುಣಿತ, ಗೌಳಿಗಾರ ಕುಣಿತ, ಮರಾಠಿ ಕುಣಿತ, ಹಳ್ಳೇರ ಕುಣಿತ, ಗುಂಡುಬರಮ, ಕಿನ್ನರಜೋಗಿ ಹಾಡುಗಾರಿಕೆ, ದುಡಿ ಕುಣಿತ ಹಾಗೂ ಡೊಳ್ಳು ಕುಣಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.