ಭಟ್ಕಳ: ಅಖಿಲ ಭಾರತ ಮಟ್ಟದ ಬಿ ಎಸ್ ಎನ್ ಎಲ್ ಮುಷ್ಕರಕ್ಕೆ ಭಟ್ಕಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯ ಸಂಘಟನೆಗಳ ಸೂಚನೆಯ ಮೇರೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಬಿ ಎಸ್ ಎನ್ ಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿನ್ನೆ ಕಚೇರಿಯನ್ನು ಮುಚ್ಚಿ ಅನಿರ್ಧಿಷ್ಠಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.
ಬಿ ಎಸ್ ಎನ್ ಎಲ್ನಲ್ಲಿ ಐ ಟಿ ಎಸ್ ಅಧಿಕಾರಿಗಳನ್ನು ಖಾಯಂ ಸೇರ್ಪಡೆಗೊಳಿಸುವುದು, ಮೊಬೈಲ್ ಸೇವೆಗೆ ಅವಶ್ಯವಾದ ಲೈನ್ ಅಭಿವೃದ್ಧಿಪಡಿಸುವುದು. ಬಿಎಸ್ಎನ್ಎಲ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರಿಗೆ ಐ ಡಿ ಎ ಭತ್ತೆಗಳನ್ನು ಪಾವತಿಸುವುದು, ಉದ್ದೇಶಿತ ಶೇ.೩೦ ಬಂಡವಾಳ ಹಿಂತೆಗೆತವನ್ನು ರದ್ದುಪಡಿಸುವುದು,ಒಂದು ಲಕ್ಷ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯ ಪ್ರಸ್ತಾಪವನ್ನು ಕೈಬಿಡುವುದು. ಬಿ ಎಸ್ ಎನ್ ಎಲ್ ಸಂಸ್ಥೆಯ ತಾಮ್ರದ ವೈರಗಳನ್ನು ಖಾಸಗಿ ಸೇವೆಯ ಸಂಸ್ಥೆಯವರೊಟ್ಟಿಗೆ ಉಪಯೋಗಿಸುವ ಪ್ರಸ್ತಾಪವನ್ನು ಹಿಂತೆಗೆದುಕೊಳ್ಳುವುದು. ಬಿ ಎಸ್ ಎನ್ ಎಲ್ ಗ್ರಾಹಕ ಸೇವೆಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡುವುದನ್ನು ವಿರೋಧಿಸುವುದು. ಬಿ ಎಸ್ ಎನ್ ಎಲ್ ಸಂಸ್ಥೆಯನ್ನು ಸರಕಾರಿ ಸ್ವಾಮ್ಯದ ಸಂಸ್ಥೆಯನ್ನಾಗಿ ಉಳಿಸಿಕೊಂಡು ಹೋಗುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿ ಎಸ್ ಎನ್ ಎಲ್ ನೌಕರರು ಮುಷ್ಕರ ಆರಂಭಿಸಿದ್ದಾರೆ. ಮುಷ್ಕರದಲ್ಲಿ ಸಿ ಎಸ್ ಪುರಾಣಿಕ, ಭಟ್ರಮಕ್ಕಿ, ನಾರಾಯಣ ಗೊಂಡ, ಉದಯ ನಾಯ್ಕ, ಈಶ್ವರ ಮೊಗೇರ, ಕೃಷ್ಣ ಗೊಂಡ,ಮಾಲತೇಶ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ ಎಸ್ ಪುರಾಣಿಕ ಬೇಡಿಕೆ ಈಡೇರುವ ತನಕ ಮುಷ್ಕರ ಅನಿರ್ಧಿಷ್ಟಾವಧಿಯವರೆಗೆ ನಡೆಯಲಿದ್ದು, ಗ್ರಾಹಕರು ಸಹಕರಿಸಬೇಕು ಎಂದರು.