ಚಿಕ್ಕಬಳ್ಳಾಪುರ, ನವೆಂಬರ್ ೩೦: ಯಾವೊಬ್ಬ ಮನುಷ್ಯನು ಕರ್ತವ್ಯದಿಂದ ವಿಮುಖನಾಗದೆ ಆತ್ಮಬಲದ ಮೂಲಕ ಯಶಸ್ಸು ಸಾಧಿಸಲು ಭಗವದ್ಗೀತೆ ಪೂರಕವಾಗಿದೆ ಎಂದು ವಿಜಯಪುರ ಬಸವಕಲ್ಯಾಣ ಮಠದ ಮಹದೇವಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಹೊಸಹುಡ್ಯದ ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ಆಯೋಜಿಸಿದ್ದ ೧೨ನೇ ಭಗವದ್ಗೀತೆ ಕಂಠಪಾಠ ಹಾಗೂ ಲಕ್ಷ್ಮಿನಾರಾಯಣ ವೇಷ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಇಂದಿನ ಆಧುನಿಕ ಸಮಾಜದಲ್ಲಿ ಮೌಲ್ಯಗಳು ಕಳೆದುಹೋಗುತ್ತಿದ್ದು, ಗುರುಹಿರಿಯರನ್ನು ಗೌರವಿಸುವ ಸಂಪ್ರದಾಯ ಕಡಿಮೆಯಾಗುತ್ತಿರುವುದು ವಿಷಾದನೀಯ. ಮನುಷ್ಯರ ಸ್ವಾರ್ಥ ಮತ್ತು ದುರ್ನಡತೆಗಳಿಂದ ಸಮಾಜ ಮಲಿನವಾಗುತ್ತಿದ್ದು ಅಪಾಯದ ಅಂಚಿಗೆ ಸಾಗುತ್ತಿದೆ. ಕಡೆಗೆ ಜನ್ಮ ನೀಡಿದ ತಂದೆ ತಾಯಿಗಳನ್ನು ಮಕ್ಕಳು ನಿರ್ಲಕ್ಷಿಸುತ್ತಿರುವುದು ದುರ್ಬಲ ಮನೋಸ್ಥಿತಿಗೆ ಹಿಡಿದ ಕನ್ನಡಿ. ಪ್ರಸ್ತುತ ಸಮಾಜದಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳು ಬೇಗನೆ ಇಂಗ್ಲಿಷ್ ಕಲಿತುಬಿಡಬೇಕೆಂಬ ಆತುರದಲ್ಲಿ ಈ ನೆಲದ ಸಂಸ್ಕೃತಿಯಿಂದ ಮಕ್ಕಳನ್ನು ದೂರ ಮಾಡುತ್ತಿದ್ದಾರೆ. ಇದು ಸಮಾಜದ ಅನಾರೋಗ್ಯಕರ ಬೆಳವಣಿಗೆಗೆ ಕಾರಣವಾಗುತ್ತದೆ. ಮೊದಲು ಪೋಷಕರು ಎಚ್ಚೆತ್ತುಕೊಂಡು ಮಕ್ಕಳನ್ನು ಉತ್ತಮ ಚಿಂತನೆಗಳ ಕಡೆ ಹೋಗುವಂತೆ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡುತ್ತಾ, ಜಾಗತೀಕರಣದ ಪ್ರವಾಹದಲ್ಲಿ ಭಾರತೀಯ ಸಂಸ್ಕೃತಿ ದಿನೇ ದಿನೇ ನಶಿಸುತ್ತಿರುವುದು ಆತಂಕದ ಸಂಗತಿ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಇಂದಿನ ಯುವಜನಾಂಗ ಮಾರುಹೋಗುತ್ತಿದ್ದಾರೆ. ಭ್ರಮೆಗಳಲ್ಲಿ ಬಿದ್ದು ವಾಸ್ತವವನ್ನು ಮರೆತು ಹೋಗುತ್ತಿದ್ದಾರೆ.ಇಂತಹ ಭ್ರಮೆಗಳಿಂದ ಹೊರಬರಲು ಭಗವದ್ಗೀತೆಯ ಅಧ್ಯಯನ ಅಗತ್ಯವಾಗಿದೆ ಎಂದರು.
ಕುಕ್ಕೆ ಸುಬ್ರಮಣ್ಯಮಠದ ವಿಶ್ವೇಶ್ವರ ತೀರ್ಥಸ್ವಾಮೀಜಿ ಆಶೀರ್ವಚನ ನೀಡಿ, ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವ ಭರತಭೂಮಿಯಲ್ಲಿ ರಾಮಾಯಣ,ಮಹಾಭಾರತ ಮತ್ತು ಭಗವದ್ಗೀತೆಗಳು ತ್ರ್ರಿರತ್ನಗಳು. ಭಾರತದ ಎರಡೂ ಮಹಾಕಾವ್ಯಗಳ ಸಾರವನ್ನು ಒಳಗೊಂಡಿರುವ ಭಗವದ್ಗೀತೆಯಲ್ಲಿ ಮನುಷ್ಯ ಸಂಸ್ಕಾರದ ದಾರಿ ಇದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಭಗವದ್ಗೀತೆ ಸಹಕಾರಿ ಎಂದರಲ್ಲದೆ ರಿಯಾಲಿಟಿ ಶೋಗಳಲ್ಲಿ ಮುಳುಗಿಹೋಗುತ್ತಿರುವ ಪೋಷಕರು ಮತ್ತು ಮಕ್ಕಳು ನೆಲಸಂಸ್ಕೃತಿಯ ವಾಸ್ತವಕ್ಕೆ ಮರಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಂದರು.
ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ೫೦೦ಕ್ಕೂ ಹೆಚ್ಚು ಶಾಲಾಮಕ್ಕಳು ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಲಕ್ಷ್ಮಿನಾರಾಯಣ ವೇಷಸ್ಪರ್ಧೆಯ ಪುಟಾಣಿಗಳು ಜನಮನರಂಜಿಸಿದರು.
ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂಬ ಮಾತಿದ್ದರೂ, ಕಂಠಪಾಠ ಸ್ಪರ್ಧೆಯಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಬಕ್ರೀದ್ ಹಬ್ಬವಿದ್ದರೂ ದೂರದ ಊರುಗಳಿಂದ ಆಗಮಿಸಿ ಭಗವದ್ಗೀತೆ ಕಂಠಪಾಠ ಒಪ್ಪಿಸಿದ್ದು ಮಕ್ಕಳ ಮುಗ್ದತೆಗೆ ಸಾಕ್ಷಿಯಾಗಿ ನೆರೆದಿದ್ದವರೆಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೋಮುವಾದ ವಿಜೃಂಭಿಸುತ್ತಿರುವ ಇಂದಿನ ದಿನಗಳಲ್ಲಿ ಮುಸ್ಲಿಂ ಮಕ್ಕಳ ಭಾಗವಹಿಸುವಿಕೆ ಮತ್ತು ತಲ್ಲೀನತೆ ನೆರೆದಿದ್ದ ಜನರನ್ನು ಮಂತ್ರಮುಗ್ದರನ್ನಾಗಿಸಿದ್ದೇ ಅಲ್ಲದೆ ಕೋಮುಸಾಮರಸ್ಯ ಮತ್ತು ಭಾವೈಕ್ಯತೆಗೆ ಇಂದಿನ ಕಾರ್ಯಕ್ರಮ ಸೇತುವೆಯಾಗಿ ಕಾಣುತ್ತಿದ್ದುದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಜಿ.ಪಂ.ಸದಸ್ಯ ಜಿ.ಆರ್.ನಾರಾಯಣಸ್ವಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗೋವಿಂದರೆಡ್ಡಿ, ಇಸ್ಕಾನ್ ನ ಲಲಿತಾಶ್ರಯದಾಸಸ್ವಾಮೀಜಿ, ಮಾಜಿಮಂಡಲ್ ಪ್ರಧಾನ್ ನಾರಾಯಣಸ್ವಾಮಿ ಮತ್ತಿತರರು ಮಾತನಾಡಿದರು. ತಾಲೂಕು ಎ.ಪಿ.ಎಂಸಿ ಅಧ್ಯಕ್ಷ ಚಂದ್ರಶೇಖರ್, ಕೈಗಾರಿಕೋದ್ಯಮಿ ಗೋವಿಂದರಾಜು, ಸಮಾಜಸೇವಕ ಭೀಮೇಶ್, ಬಿಜೆಪಿ ಮುಖಂಡ ಶ್ರೀಕಾಂತಭಟ್,ಆಸ್ತಾ ಫೌಂಢಷನ್ ನ ಅಧ್ಯಕ್ಷ ವಿಜಯರೆಡ್ಡಿ, ವಿಷ್ಣುಪ್ರಿಯ ಸಂಸ್ಥೆಯ ಕಾರ್ಯದರ್ಶಿ ಶ್ಯಾಮಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಆಢಳಿತ ಮಂಡಳಿ ಅಧ್ಯಕ್ಷ ವೈ.ಎನ್.ರಾಮಚಂದ್ರರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಷ್ಣುಪ್ರಿಯಾಶಾಲೆಯ ಶಿಕ್ಷಕ ಲೋಕೇಶ್ ನಾಥ್ ಸ್ವಾಗತಿಸಿ, ಶಿಕ್ಷಕಿ ಮುನಿರತ್ನಮ್ಮ ವಂದಿಸಿದರು. ಬಿ.ಬಿ.ಎಂ ಕಾಲೇಜಿನ ಪ್ರಾಂಶುಪಾಲ ಎನ್.ಚಂದ್ರಶೇಖರ್ ನಿರೂಪಿಸಿದರು.
ಚಿತ್ರಮಾಹಿತಿ:- ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯದ ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ಏರ್ಪಡಿಸಿದ್ದ ೧೨ನೇ ಅಂತರಶಾಲಾ ಭಗವದ್ಗೀತೆ ಕಂಠಪಾಠ ಹಾಗೂ ಲಕ್ಷ್ಮಿನಾರಾಯಣ ವೇಷಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜಯಪುರ ಬಸವಕಲ್ಯಾಣಮಠದ ಮಹದೇವಸ್ವಾಮೀಜಿ ಮಾತನಾಡಿದರು. ಶಾಸಕ ಕೆ.ಪಿ.ಬಚ್ಚೇಗೌಡ, ಜಿ.ಪಂ ಸದಸ್ಯ ಜಿ.ಆರ್.ನಾರಾಯಣಸ್ವಾಮಿ, ಆಡಳಿತ ಮಂಡಳಿ ಅಧ್ಯಕ್ಷ ವೈ.ಎನ್.ರಾಮಚಂದ್ರರೆಡ್ಡಿ ಮತ್ತಿತರರು ಚಿತ್ರದಲ್ಲಿದ್ದಾರೆ.