ಬೆಂಗಳೂರು: ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ದೇಶದ ಎಲ್ಲರ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರವಿವಾರ ವಿಧಾನಸೌಧದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ಸಂವಿಧಾನ ಅಂಗೀಕಾರವಾದ ದಿನ. 1949ರ ನ.26ರಂದು ಭಾರತದ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ.ಬಾಬುರಾಜೇಂದ್ರ ಪ್ರಸಾದ್ ಅವರಿಗೆ ಭಾರತದ ಸಂವಿಧಾನವನ್ನು ಸಲ್ಲಿಸಿದ ನಂತರ ಸಂವಿಧಾನ ಅಂಗೀಕಾರವಾಯಿತು. ಆದುದರಿಂದ ಈ ದಿನವನ್ನು ಸಂವಿಧಾನ ದಿನವೆಂದು ಇಡೀ ದೇಶದಲ್ಲಿ ಆಚರಿಸಲಾಗುತ್ತದೆ ಎಂದು ಸ್ಮರಿಸಿದರು.
ಉದ್ದೇಶಗಳು ಸಾರ್ಥಕ: ಇಂದು ಡಾ.ಬಾಬು ರಾಜೇಂದ್ರ ಪ್ರಸಾದ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿಯ ಎಲ್ಲ ಸದಸ್ಯರನ್ನು ನೆನಪಿಸಿಕೊಳ್ಳಬೇಕು. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಭಾರತದ ಸಂವಿಧಾನ ಶ್ರೇಷ್ಠವಾದುದು. ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ, ಸರಿಯಾದ ಕೈಗಳಲ್ಲಿ ಸಂವಿಧಾನವಿರದಿದ್ದರೆ ಸಂವಿಧಾನ ಸಾರ್ಥಕವಾಗುವುದಿಲ್ಲ ಎಂದು ಅಂಬೇಡ್ಕರ್ ಅವರು ಎಚ್ಚರಿಕೆಯ ಮಾತುಗಳನ್ನು ನುಡಿದಿದ್ದರು.
ಸಂವಿಧಾನದ ಪರವಾಗಿರುವ ಕೈಗಳಲ್ಲಿ ಇದ್ದಾಗ ಮಾತ್ರ, ಸಂವಿಧಾನದ ಧೈಯೋದ್ದೇಶಗಳನ್ನು ಸಾಧಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಆಶಯಗಳಂತೆ ನಡೆಯುತ್ತಿದೆ: ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ' ಎನ್ನುವಂತಹ ಸಮಾಜ ನಿರ್ಮಾಣವಾಗಬೇಕೆಂದು ಗಾಂಧಿ, ನೆಹರೂ ಅವರು ಕನಸು ಕಂಡಿದ್ದರು. ನಮ್ಮ ಸರಕಾರ ಸಂವಿಧಾನದ ಆಶಯಗಳಂತೆ ನಡೆಯಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು.
ಎಲ್ಲ ಶಾಲೆಗಳಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ. ಸರಕಾರದ ಈ ಕ್ರಮದಿಂದ ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿ, ನಮ್ಮ ದೇಶದ ಸಂವಿಧಾನದ ಧೈಯೋದ್ದೇಶಗಳನ್ನು ಅರಿತು ನಡೆಯಲು ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.