ಚಂಡಿಗಡ: 'ದಿಲ್ಲಿ ಚಲೋ' ಆಂದೋಲನದ ಭಾಗವಾಗಿರುವ ಪ್ರತಿಭಟನಾನಿರತ ರೈತರ ವಿರುದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ)ಯ ನಿಬಂಧನೆಗಳನ್ನು ಹೇರುವ ತಮ್ಮ ಮೊದಲಿನ ನಿರ್ಧಾರವನ್ನು ಹರ್ಯಾಣ ಪೊಲೀಸರು ಹಿಂದೆಗೆದುಕೊಂಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹಾಗೂ ಅಪರಾಧ ಚಟುವಟಿಕೆಗಳನ್ನು ತಡೆಯಲು ಎನ್ಎಸ್ಎ,1980ರ ಕಲಂ 2(3)ರಡಿ ಪ್ರತಿಭಟನಾನಿರತ ರೈತ ಸಂಘಟನೆಗಳ ಪದಾಧಿಕಾರಿಗಳ ಬಂಧನ ಪ್ರಕ್ರಿಯೆಯನ್ನು ಜಾರಿಗೆ ತರುವುದಾಗಿ ಹರ್ಯಾಣ ಪೊಲೀಸರು ಹೇಳಿಕೆಯನ್ನು ಹೊರಡಿಸಿದ್ದರು.
'ಕೆಲವು ರೈತ ಸಂಘಟನೆಗಳ ನಾಯಕರ ಮೇಲೆ ಎನ್ಎಸ್ಎ ಕಾಯ್ದೆಯ ನಿಬಂಧನೆಗಳನ್ನು ಹೇರುವ ನಿರ್ಧಾರವನ್ನು ಪುನರ್ ಪರಿಶೀಲಿಸಲಾಗಿದೆ ಮತ್ತು ಅದನ್ನು ಹಿಂದೆಗೆದುಕೊಳ್ಳಲಾಗುವುದು. ಶಾಂತಿಯನ್ನು ಕಾಯ್ದುಕೊಳ್ಳುವಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ನಾವು ಪ್ರತಿಭಟನಾನಿರತ ರೈತರು ಮತ್ತು ಅವರ ನಾಯಕರನ್ನು ಕೋರಿಕೊಳ್ಳುತ್ತಿದ್ದೇವೆ' ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ (ಅಂಬಾಲಾ ವಲಯ) ಶಿಬಾಶ ಕಬಿರಾಜ್ ತಿಳಿಸಿದರು.
ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿರುವ ರೈತರು ಇನ್ನೂ ಹರ್ಯಾಣವನ್ನು ಪ್ರವೇಶಿಸಿಲ್ಲವಾದ್ದರಿಂದ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಸದ್ಯಕ್ಕೆ ಯಾವುದೇ ಕ್ರಮವನ್ನು ಆರಂಭಿಸುವುದಿಲ್ಲ.