ಹೊಸದಿಲ್ಲಿ: ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ದ ಮೂಲಕ ಚಲಾಯಿತವಾದ ಮತಗಳನ್ನು ವಿವಿಪ್ಯಾಟ್ ಯಂತ್ರದಲ್ಲಿ ದಾಖಲಾದ ಸ್ಲಿಪ್ ಗಳ ಜೊತೆ ತಾಳೆ ಹಾಕುವ ಮೂಲಕ ಅವುಗಳ ಕಾರ್ಯನಿರ್ವಹಣೆಯ ಸಾಚಾತನವನ್ನು ರನ್ನು ದೃಢಪಡಿಸಿಕೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲಿನ ತನ್ನ ತೀರ್ಪನ್ನು ಗುರುವಾರ ಸುಪ್ರೀಂಕೋರ್ಟ್ ಕಾದಿರಿಸಿದೆ.
ಈ ಅರ್ಜಿಗಳ ಕುರಿತು ಚುನಾವಣಾ ಆಯೋಗದ ಉತ್ತರವನ್ನು ಗುರುವಾರ ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ತನ್ನ ತೀರ್ಪನ್ನು ಕಾದಿರಿಸಿತು. ಚುನಾವಣಾ ಆಯೋಗದ ಪರ ವಕೀಲರಾದ ಹಿರಿಯ ನ್ಯಾಯವಾದಿ ಮಣಿಂದರ್ ಸಿಂಗ್ ಅವರು, ಇವಿಎಂಗಳ ಕಾರ್ಯನಿರ್ವಹಣೆ ಪ್ರಕ್ರಿಯೆ ಬಗ್ಗೆ ನ್ಯಾಯಪೀಠಕ್ಕೆ ವಿವರಣೆಯನ್ನು ನೀಡಿದರು.
ಅರ್ಜಿದಾರರ ಪರವಾಗಿ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಗೂ ಹಿರಿಯ ನ್ಯಾಯವಾದಿ ಗೋಪಾಲ್ ಶಂಕರ್ ನಾರಾಯಣನ್ ವಾದಿಸಿದ್ದರು.