ಭಟ್ಕಳ: ಬೈಲೂರಿನ ಶ್ರೀ ಅನಿರುದ್ದ ಬಾಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್.ಎನ್.ಎಸ್. ಡಿ.ಇಡಿ. ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೈಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ಭಂಡಾರಿ ಪ್ರತಿಯೋರ್ವರೂ ಸಮಾಜ ಮುಖಿಯಾಗಿ ಕೆಲಸ ಮಾಡಬೇಕು. ತಮ್ಮ ಸ್ವಾರ್ಥಕ್ಕಾಗಿ ಸಮಾಜ ಘಾತುಕ ಕಾರ್ಯದಲ್ಲಿ ತೊಡಗಿಕೊಂಡರೆ ಸಮಾಜದ ಪ್ರೀತಿ, ವಿಶ್ವಾಸ, ಸಹಕಾರದಿಂದ ವಂಚಿತರಾಗಬೇಕಾಗುತ್ತದೆ ಎಂದರು. ಎಲ್ಲರೂ ಪರಸ್ಪರ ಸಹಕಾರ ಭಾವನೆಯಿಂದ ಇದ್ದಾಗ ಮಾತ್ರ ಸಮಾಜದ ಸರ್ವತೋಮುಖ ಬೆಳವಣಿಗೆ ಸಾದ್ಯ ಎಂದೂ ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಆರ್.ಎನ್ ಎಸ್. ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಎಂ.ವಿ.ಹೆಗಡೆ ಅವರು ಸಮಾಜದಲ್ಲಿ ನೈತಿಕತೆಯ ಅಧಃಪತನವಾಗುತ್ತಿರುವುದನ್ನು ತಡೆಯಲು ಶಾಲಾ-ಕಾಲೇಜುಗಳಲ್ಲಿ ನೈತಿಕ ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡಬೇಕಾದ ಅವಶ್ಯಕತೆಯಿದೆ. ಇದರಿಂದ ಯುವ ಜನರನ್ನು ಸಾಮಾಜಿಕ ಅಪರಾಧಿತನದಿಂದ ಮುಕ್ತಗೊಳಿಸಬೇಕಿದೆ ಎಂದೂ ಹೇಳಿದರು. ಇನ್ನೋರ್ವ ಮುಖ್ಯ ಅತಿಥಿ ಭಟ್ಕಳ ಅರ್ಬನ್ ಬ್ಯಾಂಕಿನ ಮುರ್ಡೇಶ್ವರ ಶಾಖೆಯ ಶಾಖಾಧಿಕಾರಿ ಶಂಭು ಹೆಗಡೆ ಅವರು ಮಾತನಾಡಿ ಬೈಲೂರಿನ ಎನ್.ಎಸ್.ಎಸ್. ಕ್ಯಾಂಪ್ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡಿದೆ ಎಂದು ಹೇಳಿದ ಅವರು ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. ಬೈಲೂರಿನ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತೀಶ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಎನ್.ಎಸ್. ಡಿ.ಇಡಿ. ಕಾಲೇಜಿನ ಪ್ರಾಂಶುಪಾಲ ಎಸ್.ಜಿ.ಭಟ್ಟ ವಹಿಸಿದ್ದರು. ಪ್ರಶಿಕ್ಷಣಾರ್ಥಿ ಕುಮಾರಿ ಸವಿತಾ ನಾಯ್ಕ ಸ್ವಾಗತಿಸಿದರು. ಕುಮಾರಿ ಕೀರ್ತಿ ಭಟ್ಟ ನಿರೂಪಿಸಿದರು. ಶಿಬಿರಾಧಿಕಾರಿ ಅನಂತ ಭಟ್ಟ ವಂದಿಸಿದರು.