ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲ: ಪುರಿ ಶಂಕರಾಚಾರ್ಯ

ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲ: ಪುರಿ ಶಂಕರಾಚಾರ್ಯ

Tue, 16 Jan 2024 05:34:23  Office Staff   Vb

ಕೋಲ್ಕತಾ,: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ತಾನು ಭಾಗವಹಿಸುವುದಿಲ್ಲ ಎಂಬ ನಿಲುವನ್ನು ಪುನರುಚ್ಚರಿಸಿರುವ ಪುರಿ ಶಂಕರಾಚಾರ್ಯ ಶ್ರೀ ನಿಶ್ಚಲಾನಂದ ಸರಸ್ವತಿ ಅವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಅಪೇಕ್ಷಣೀಯವಲ್ಲ ಮತ್ತು ಸಂವಿಧಾನವೂ ಅದಕ್ಕೆ ಅವಕಾಶವನ್ನು ನೀಡುವುದಿಲ್ಲ ಎಂದು ಪುರಿ ಶಂಕರಾಚಾರ್ಯ ಶ್ರೀ ನಿಶ್ಚಲಾನಂದ ಸರಸ್ವತಿ ಅವರು ಹೇಳಿದ್ದಾರೆ.

ಶಂಕರಾಚಾರ್ಯರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಶ್ರೇಷ್ಠತೆಯ ಹೊರತಾ ಗಿಯೂ ಅವರಿಗೆ ರಾಮ ಮಂದಿರದ ಗರ್ಭಗುಡಿಯಲ್ಲಿ ಸ್ಥಾನವನ್ನು ಕಲ್ಪಿಸಲಾಗಿಲ್ಲ ಮತ್ತು ಹೊರಗಡೆಯೇ ಇರುವಂತೆ ಸೂಚಿಸಲಾಗಿದೆ. ಇದು ನನಗೆ ಸ್ವೀಕಾರಾರ್ಹವಲ್ಲ. ಕಾರ್ಯಕ್ರಮದಲ್ಲಿ ಕುಳಿತುಕೊಂಡು ರಾಮ ಮಂದಿರ ಉದ್ಘಾಟನೆಯನ್ನು ನೋಡುವುದು ಮತ್ತು ಚಪ್ಪಾಳೆ ತಟ್ಟುವುದು ನನಗೆ ಇಷ್ಟವಿಲ್ಲ.

| ಪುರಿ ಶಂಕರಾಚಾರ್ಯ ಶ್ರೀ ನಿಶ್ಚಲಾನಂದ ಸರಸ್ವತಿ

ಶನಿವಾರ ಪಶ್ಚಿಮ ಬಂಗಾಳದ ಸಾಗರದ್ವೀಪದಲ್ಲಿ ಗಂಗಾಸಾಗರ ಉತ್ಸವದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳಿಗೆ ಅವರದೇ ಆದ ಮಿತಿಗಳಿವೆ ಮತ್ತು ಸಂವಿಧಾನದಡಿ ಅವರಿಗೆ ಜವಾಬ್ದಾರಿಗಳಿವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ನಿಯಮಗಳು ಮತ್ತು ನಿರ್ಬಂಧಗಳಿದ್ದು, ಇದನ್ನು ಪಾಲಿಸಬೇಕಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ರಾಜಕಾರಣಿಗಳ ಹಸ್ತಕ್ಷೇಪವು ಹುಚ್ಚುತನವಾಗಿದೆ. ಸಂವಿಧಾನದ ಪ್ರಕಾರ ಇದು ಹೇಯ ಅಪರಾಧವೂ ಹೌದು ಎಂದು ಹೇಳಿದರು.

ಎಲ್ಲ ನಾಲ್ಕೂ ಪೀಠಗಳ ಶಂಕರಾಚಾರ್ಯರು ತಾವು ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿದ್ದಾರೆ. ಉತ್ತರಾಖಂಡದ ಜೋಶಿಮಠ, ಗುಜರಾತಿನ ದ್ವಾರಕಾ, ಒಡಿಶಾದ ಪುರಿ ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಈ  ಪೀಠಗಳಿವೆ.

ಅಯೋಧ್ಯೆಯಲ್ಲಿ ಕಾರ್ಯ ಕ್ರಮವು ಧರ್ಮಶಾಸ್ತ್ರಗಳ ಪ್ರಕಾರ ನಡೆಯುತ್ತಿಲ್ಲ,ಹೀಗಾಗಿ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ತಾವು ಭಾಗವ ಹಿಸುವುದಿಲ್ಲ ಎಂದು ಪುರಿ ಮತ್ತು ಜೋಶಿಮಠ ಪೀಠಗಳ ಶಂಕರಾಚಾರ್ಯರು ಹೇಳಿದ್ದಾರೆ. ಮಕರ ಸಂಕ್ರಾಂತಿಯ ಅಂಗವಾಗಿ ವಾರ್ಷಿಕ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳಲು ಗಂಗಾಸಾಗರ ಉತ್ಸವಕ್ಕೆ ಆಗಮಿಸಿದ್ದ ಪುರಿ ಶಂಕರಾಚಾರ್ಯರು, ಧರ್ಮಗ್ರಂಥಗಳ ಪ್ರಕಾರ ಪ್ರಾಣ ಪ್ರತಿಷ್ಠಾಪನೆಗೆ ಸ್ಥಾಪಿತ ನಿಯಮಗಳಿವೆ. ದೇಶದ ಮುಖ್ಯಸ್ಥರು ಅಥವಾ ಪ್ರಧಾನ ಮಂತ್ರಿ ಸಹ ಇವುಗಳನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದರು. ಒಬ್ಬರ ಹೆಸರಿನ ಪ್ರಚಾರಕ್ಕಾಗಿ ಈ ನಿಯಮಗಳನ್ನು ಮೀರುವುದು ದೇವರ ವಿರುದ್ದ ದಂಗೆ ಕೃತ್ಯವಾಗಿದೆ ಮತ್ತು ಅದು ವಿನಾಶದತ್ತ ಕೊಂಡೊಯ್ಯುತ್ತದೆ ಎಂದರು.

ತಾನು ಅಯೋಧ್ಯೆಗೆ ಹೋಗುತ್ತಿರುತ್ತೇನೆ, ಆದರೆ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ಪುನರುಚ್ಚರಿಸಿದರು. ಕಾರ್ಯಕ್ರಮಕ್ಕೆ ಹಾಜರಾಗದಂತೆ ಯಾರನ್ನೂ ತಾನು ತಡೆಯುವುದಿಲ್ಲ ಮತ್ತು ತನಗೆ ಕೇಂದ್ರ ಸರಕಾರದ ಬಗ್ಗೆ ಕೋಪವಿಲ್ಲ ಎಂದು ಹೇಳಿದ ಪುರಿ ಶಂಕರಾಚಾರ್ಯ, ಆದರೆ ಓರ್ವ ಸಹಚರನೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಆಹ್ವಾನ ಪತ್ರದಲ್ಲಿ ತಿಳಿಸಿರುವುದಕ್ಕಾಗಿ ವಿಷಾದವಿದೆ ಎಂದರು. ತನಗೆ ತನ್ನ ಸ್ಥಾನದ ಘನತೆಯ ಅರಿವಿದೆ, ಹೀಗಾಗಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಜ.4ರಂದು ಸುದ್ದಿಗಾರರಿಗೆ ತಿಳಿಸಿದ್ದ ಪುರಿ ಶಂಕರಾಚಾರ್ಯರು, 'ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರವನ್ನು ಉದ್ಘಾಟಿಸುತ್ತಾರೆ. ಅವರು ವಿಗ್ರಹವನ್ನು ಸ್ಪರ್ಶಿಸುತ್ತಾರೆ. ಆಗ ನಾನು ಏನು ಮಾಡಬೇಕು? ನಿಂತುಕೊಂಡು ಚಪ್ಪಾಳೆ ಹೊಡೆಯಬೇಕೇ' ಎಂದು ಪ್ರಶ್ನಿಸಿದ್ದರು.


Share: