ಅತ್ಯಾಚಾರ ಆರೋಪಿ ಪ್ರಜ್ವಲ್ ರನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳು
ಬೆಂಗಳೂರು: ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಆರೋಪದಡಿ ಬಂಧಿತ ಹಾಸನ ಸಂಸದ ಪ್ರಜ್ವಲ್ ರೇವಣ್ಣ ರನ್ನು ಎಸ್ಐಟಿ ಅಧಿಕಾರಿಗಳು ಇಂದು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಪ್ರಜ್ವಲ್ ರೇವಣ್ಣ ರನ್ನು ಜೂನ್ 6 ರ ವರೆಗೆ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದೆ.
ಆರೋಪಿಯ ಮೊಬೈಲ್ ಮಾತ್ರ ಸಿಕ್ಕಿದೆ. ಅದರಲ್ಲಿ ಫೇಸ್ ಲಾಕ್ ಅಳವಡಿಸಲಾಗಿದೆ. ಅದನ್ನು ಪರಿಶೀಲನೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಎಸ್ಐಟಿ ವಶಕ್ಕೆ ನೀಡಬೇಕು ಎಂದು ಎಸ್ಐಟಿ ಪರ ವಕೀಲ ಅಶೋಕ್ ನಾಯಕ್ ಕೋರಿದರು. ಪ್ರಜ್ವಲ್ ಪರ ವಕೀಲ ಜಿ.ಅರುಣ್ ವಾದ ಮಂಡಿಸಿ, ಆರೋಪಿ ವಿರುದ್ಧ ದಾಖಲಾಗಿರುವ ಪ್ರಕರಣ ನಾಲ್ಕು ವರ್ಷದ ಹಿಂದಿನದ್ದಾಗಿದೆ. ಇದು ಜಾಮೀನು ಸಹಿತ ಆರೋಪ ಆಗಿದೆ. ವಿನಾಕಾರಣ ನಮ್ಮ ಕಕ್ಷಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರನ್ನು ಸಿದ್ಧಪಡಿಸಿ ದಾಖಲಿಸಲಾಗಿದೆ. ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕಾಗಿತ್ತು. ಎಲ್ಲ ಪ್ರಕ್ರಿಯೆ ವಿಡಿಯೋ ರೆಕಾರ್ಡ್ ಮಾಡಬೇಕಾಗಿತ್ತು. ವಿಚಾರಣೆ ವೇಳೆ ವಿಶೇಷ ಅಭಿಯೋಜಕರು ಅನಗತ್ಯ ಪದಗಳ ಬಳಕೆ ಮಾಡಿ ವಾದ ಮಂಡಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.