ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಾಸನ: ಸರ್ಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರ - ತಪ್ಪಿತಸ್ಥರಿಗೆ ಶಿಕ್ಷೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ

ಹಾಸನ: ಸರ್ಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರ - ತಪ್ಪಿತಸ್ಥರಿಗೆ ಶಿಕ್ಷೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ

Fri, 11 Dec 2009 13:22:00  Office Staff   S.O. News Service
ಹಾಸನ-ಡಿ-೧೦: ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಸರಕಾರದ ವಿವಿಧ ಯೋಜನೆಯಲ್ಲಿ ಆಗಿರುವ ಭ್ರಷ್ಟಾಚಾರ ತಡೆಗಟ್ಟಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಕಾರ್ಯಕರ್ತರು ಗುರುವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತಮಟೆ ಬಡಿದುಕೊಂಡು ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
 
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯನ್ನು ಕೆಲವೆಡೆ ಗುತ್ತಿಗೆದಾರರು, ಪಂಚಾಯಿತಿ ಸದಸ್ಯರು  ಮತ್ತು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬೇನಾಮಿ ಹೆಸರಿನಲ್ಲಿ ಜಾಬ್‌ಕಾರ್ಡ್ ಬರೆದು ಬಡ ಕೂಲಿ ಕಾರ್ಮಿಕರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ದೂರಿದರು.
 
ಅಂಗನವಾಡಿಯಲ್ಲಿ ಬಡ ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
 
ನಗರಸಭೆಯಲ್ಲಿ ಶೇ.೧೮ರ ಮೀಸಲು ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ದಲಿತರಿಗೆ ಅನುಕೂಲವಾಗುವಂತೆ ಕ್ರಿಯಾಯೋಜನೆ ರೂಪಿಸದೆ ಮನಸೋ ಇಚ್ಚೆ ಕ್ರಿಯಾ ಯೋಜನೆ ರೂಪಿಸುತ್ತಿದ್ದಾರೆ ಎಂದು ದೂರಿದರು.
 
ಸರಕಾರದ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ದೊರಕಿಸದೆ ಅನ್ಯಾಯ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ರಾಜ್ಯ ಸಂಘಟನಾ ಸಂಚಾಲಕ ಆರ್.ಮರಿಜೋಸೆಫ್ ಒತ್ತಾಯಿಸಿದರು.
 
ವೇದಿಕೆಯ ಜಿಲ್ಲಾ ಸಂಚಾಲಕಿ ವಿಕ್ಟೋರಿಯಾ ರಾಣಿ, ಜಿಲ್ಲಾ ಸಂಘಟನಾ ಸಂಚಾಲಕ ವೆಂಕಟೇಶ್, ಚಂದ್ರಶೇಖರ್, ಮಲ್ಲೆದೇವರಪುರ ಯೋಗೇಶ್ ನೇತೃತ್ವ ವಹಿಸಿದ್ದರು.

Share: