ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಂಜುಮನ್ ಮಹಾವಿದ್ಯಾಲಯದ ಶೈಕ್ಷಣಿಕ ಸಾಧನೆ: ಭಟ್ಕಳದ ಹೆಮ್ಮೆ

ಅಂಜುಮನ್ ಮಹಾವಿದ್ಯಾಲಯದ ಶೈಕ್ಷಣಿಕ ಸಾಧನೆ: ಭಟ್ಕಳದ ಹೆಮ್ಮೆ

Wed, 25 Sep 2024 03:41:48  Office Staff   SOnews

ಅಂಜುಮನ್ ಮಹಾವಿದ್ಯಾಲಯದ ಶೈಕ್ಷಣಿಕ ಸಾಧನೆ: ಭಟ್ಕಳದ ಹೆಮ್ಮೆ

ಭಟ್ಕಳದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರವು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಮತ್ತು ಉತ್ತರಕನ್ನಡ ಜಿಲ್ಲೆಯಾದ್ಯಂತ ಗಮನ ಸೆಳೆಯುವಂತಹ ಶೈಕ್ಷಣಿಕ ಸಾಧನೆ ಮಾಡುತ್ತಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ರ‍್ಯಾಂಕುಗಳು, ಚಿನ್ನದ ಪದಕಗಳು, ಮತ್ತು ನಗದು ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡು, ಮಹಾವಿದ್ಯಾಲಯದ ಕೀರ್ತಿಯನ್ನು ಎತ್ತರಕ್ಕೆ ಮಾಡುತ್ತಿದ್ದಾರೆ.

ಈ ವರ್ಷ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕುಮಾರ ಮೋಹಿದ್ದೀನ್ ಅಸ್ಬಾ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಒಂಬತ್ತನೇ ರ‍್ಯಾಂಕ್ ಪಡೆದಿದ್ದು, ಬಿ.ಕಾಂ. ಅಂತಿಮ ವರ್ಷದಲ್ಲಿ ಐದು ವಿಷಯಗಳಿಗೆ ನೂರಕ್ಕೆ ನೂರು ಅಂಕ ಗಳಿಸುವ ಮೂಲಕ ಮಹಾನ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪೂಜಾ ಪ್ರಕಾಶ ನಾಯ್ಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಮೂರನೇ ರ‍್ಯಾಂಕ್ ಪಡೆಯಲು ಯಶಸ್ವಿಯಾಗಿ, ಕನ್ನಡ ವಿಷಯದಲ್ಲಿ ಅತ್ಯಧಿಕ ಅಂಕ ಪಡೆದು ಎರಡು ಚಿನ್ನದ ಪದಕ ಹಾಗೂ ನಗದು ಪುರಸ್ಕಾರಗಳನ್ನು ಗೆದ್ದಿದ್ದಾರೆ. ಪೂಜಾ ‘ಮಿರ್ಜಿ ಅಣ್ಣಾರಾವ್ ಶೆಡಬಾಲ ಸುವರ್ಣ ಪದಕ,’ ‘ಮಲ್ಲಪ್ಪ ನಿಂಗಪ್ಪ ಇಂಗಳಗಿ ಸ್ಮಾರಕ ಸುವರ್ಣ ಪದಕ,’ ಮತ್ತು ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಗದು ಪುರಸ್ಕಾರ’ ಗಳಿಗೆ ಭಾಜನಳಾಗಿದ್ದಾರೆ.

ಈ ಸಾಧನೆಗಳ ಹಿನ್ನೆಲೆ, ಕಳೆದ ವರ್ಷದ ಬಿ.ಎ. ವಿದ್ಯಾರ್ಥಿ ಶ್ರೇಯಸ್ ನಾಯ್ಕ ಕೂಡಾ ಕನ್ನಡ ವಿಷಯದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದಿದ್ದನ್ನು ಇಲ್ಲಿ ನೆನಪಿಸಬಹುದು.

ಕನ್ನಡ ಎಂ.ಎ. ವಿದ್ಯಾರ್ಥಿನಿ ಮಾಯಾ ನಾಯ್ಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೂ, ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗದಲ್ಲಿ ನಿರಂತರತೆ ಇರದ ಕಾರಣ ರ‍್ಯಾಂಕ್ ಮತ್ತು ಚಿನ್ನದ ಪದಕಗಳನ್ನು ಪಡೆಯುವಲ್ಲಿ ವಿಫಲರಾದುದು ವಿಷಾದನೀಯವಾಗಿದೆ ಎಂದು ಅಂಜುಮನ್ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ.ಆರ್.ಎಸ್.ನಾಯಕ ತಿಳಿಸಿದ್ದಾರೆ.

ಈ ಎಲ್ಲಾ ಸಾಧನೆಗೆ ಅಂಜುಮನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಮತ್ತು ಕಾಲೇಜಿನ ಶಿಕ್ಷಕ ವೃಂದವು ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿಯೂ ಈ ರೀತಿಯ ಸಾಧನೆ ಮುಂದುವರಿಯಲಿ ಎಂದು ಹಾರೈಸಿದ್ದಾರೆ.

anjuman_rank-2.jpeganjuman_rank.jpeg


Share: