


ಗಡಿಯ ಕಾವಲಿಗೆ ನೀರೆಯರು
ಒಂದು ಕಾಲದಲ್ಲಿ ಭಾರತದ ಮಹಿಳೆಗೆ ಯಾವುದೇ ಸ್ಥಾನಮಾನವು ಇರಲಿಲ್ಲ. ಮನೆಯೊಳಗಿನ ಕೆಲಸವನ್ನು ಬಿಟ್ಟರೆ ಉಳಿದವುಗಳಲ್ಲಿ ಪುರುಷನ ಕೈಗೊಂಬೆಯಾಗಿರುತ್ತಿದ್ದಳು. ವಿದ್ಯಾಭ್ಯಾಸ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸಹ ಅಸಾಧ್ಯವಾಗಿತ್ತು. ಹೀಗೆ ಮುಂದುವರಿದ ಈ ಸಂಪ್ರಾದಾಯಗಳಲ್ಲಿ ಎಲ್ಲ ಕಟ್ಟುನಿಟ್ಟುಗಳು ಬೇರೆ ಬೇರೆಯಾಗುತ್ತಾ ಬಂತು. ಮನೆಯೊಳಗಿನ ಕೆಲಸಗಳಿಗೆ ಮೀಸಲಾಗಿದ್ದ ಮಹಿಳೆ ಮನೆಯ ಹೊರಗಿನ ಕೆಲಸಗಳನ್ನು ಮಾಡುವತ್ತ ದೃಷ್ಟಿ ಹಾಯಿಸಿದಳು. ಹೀಗೆಯೇ ಮುಂದುವರಿಯುತ್ತಾ ಬಂದ ಮಹಿಳೆ ಭಾರತದ ಸ್ವಾತಂತ್ರ ಸಂಗ್ರಾಮದಲ್ಲೂ ಭಾಗವಹಿಸಿದಳು. ದೇಶದ ಸ್ವಾತಂತ್ರಕ್ಕಾಗಿ ಪಣತೊಟ್ಟು ಅನೇಕ ನಾಯಕರುಗಳಿಗೆ ಬೆನ್ನೆಲುಬಾಗಿ ನಿಂತಳು.
ಅಂದು...
೧೮೫೭ರಲ್ಲಿ ಪ್ರಾರಂಭವಾದ ಭಾರತದ ಸ್ವಾತಂತ್ರ ಹೋರಾಟವನ್ನು ನಾವು ಪ್ರಥಮ ಸ್ವಾತಂತ್ರ ಸಂಗ್ರಾಮವೆಂದು ಕರೆದರೆ, ಬ್ರಿಟಿಷರು ಇದನ್ನು ಸಿಪಾಯಿ ದಂಗೆ ಎಂದು ಕರೆದರು. ಈ ಹಂತದಿಂದಲೇ ಮಹಿಳೆ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದಳು. ಈ ರೀತಿಯಾಗಿ ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿದ ಪ್ರಥಮ ಮಹಿಳೆಯೆಂದರೆ ಝಾನ್ಸಿರಾಣಿ ಲಕ್ಷ್ಮೀ ಬಾಯಿ ೧೮೫೭ರ ಸಂಗ್ರಾಮದಲ್ಲಿ ಯಾವ ನಾಯಕರಿಗೂ ಕಡಿಮೆಯಿಲ್ಲದೇ ಬ್ರಿಟಿಷರ ವಿರುದ್ಧ ಹೋರಾಡಿದಳು. ಬ್ರಿಟಿಷರನ್ನು ಪಣತೊಟ್ಟು ಎದುರಿಸಿದ ಕಾರಣ ಇವಳ ಹೋರಾಟದ ಕಿಚ್ಚನ್ನು ನೋಡಿ ಅನೇಕ ಮಹಿಳೆಯರು ಆ ಸಂಗ್ರಾಮದಲ್ಲಿ ಭಾಗವಹಿಸಿದರು. ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಮುಂತಾದವರನ್ನು ಉದಾಹರಿಸಬಹುದು. ಇಲ್ಲಿ ಆರಂಭವಾದ ಮಹಿಳೆಯರ ಹೋರಾಟ ೧೯೪೭ರವರೆಗೂ ಮುಂದುವರಿಯಿತು.
ಮುಂದೆ ಸುಭಾಷ್ಚಂದ್ರ ಬೋಸ್ರವರು ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲೂ ಅನೇಕ ಮಹಿಳೆಯರು ಸೇರಿಕೊಂಡು ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದರು. ೧೯ನೇ ಶತಮಾನದಲ್ಲಿ ಪ್ರಾರಂಭವಾದ ರಾಷ್ಟ್ರೀಯ ಚಳವಳಿಯಲ್ಲಿಯೂ ಮಹಿಳೆ ಸಕ್ರಿಯವಾಗಿ ಭಾಗವಹಿಸಿದ್ದನ್ನು ಕಾಣಬಹುದು. ೧೯ ನೇ ಶತಮಾನದ ಕೊನೆಯ ದಶಕಗಳಲ್ಲಿ ಪುಟಿದೆದ್ದ ರಾಷ್ಟ್ರೀಯತೆಯು ಸಹಜವಾಗಿಯೇ ಮಹಿಳೆಯರ ಹೃದಯವನ್ನು ತಟ್ಟಿತ್ತು. ಅನಂತರ ನಡೆದ ಸ್ವದೇಶಿ ಚಳವಳಿ , ಗಾಂಧೀಜಿಯ ನೇತೃತ್ವದಲ್ಲಿ ನಡೆದ ಚಳವಳಿಗಳು ರಾಷ್ಟ್ರೀಯತೆಯನ್ನು ಇನ್ನಷ್ಟು ಉದ್ದೀಪನಗೊಳಿಸಿತು. ಪರಿಣಾಮವಾಗಿ ಸಹಸ್ರ ಸಂಖ್ಯೆಯಲ್ಲಿ ಮಹಿಳೆಯರು ಭಾರತದ ವಿಮೋಚನಾ ಚಳವಳಿಗೆ ಧುಮುಕಿದರು.
ಗಾಂಧೀಜಿಯ ಚಿಂತನೆ, ಕಾರ್ಯಕ್ರಮಗಳಿಂದ ಪ್ರಭಾವಿತಗೊಂಡು ಲಕ್ಷಾಂತರ ಮಂದಿ ಮಹಿಳೆಯರು ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿದ್ದರು. ಅವರಲ್ಲಿ ರೈತ, ಕಾರ್ಮಿಕ, ಆದಿವಾಸಿ ಮಹಿಳೆಯರು ಹಾಗೂ ವಿವಿಧ ವರ್ಗಗಳಿಗೆ ಸೇರಿದ ಗೃಹಿಣಿಯರಿದ್ದರು. ಈ ನಿಟ್ಟಿನಲ್ಲಿ ನಾವು ಕೆಲವು ಪ್ರಮುಖ ನಾಯಕಿಯರನ್ನು ಗುರುತಿಸುವುದಾದರೆ ಕಸ್ತೂರ್ಬಾ ಗಾಂಧಿ ಸ್ವತಹ ಗಾಂಧೀಜಿಯವರ ಪತ್ನಿಯಾಗಿದ್ದು ಗಾಂಧಿಯವರ ಜತೆಗೂಡಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದರು. ಗಾಂಧಿ ಕಸ್ತೂರ್ಬಾ ಕುರಿತು ಆಡಿರುವ ಮಾತುಗಳು ಆಕೆಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. “ ಕಸ್ತೂರ್ಬಾ ಇಲ್ಲದಿದ್ದರೆ ನಾನು ಅನಾಥನಾಗುತ್ತಿದ್ದೆ. ಆಕೆ ನನಗೆ ಎಂದೆಂದಿಗೂ ಗುರು ಸಮಾನಳು.” ಎಂಬ ಮಾತು ಗಮನಾರ್ಹವಾದುದು.
ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದ ಇನ್ನೊರ್ವ ಮಹಿಳೆ ಡಾ.ಆನ್ನಿ ಬೆಸೆಂಟ್. ಭಾರತವನ್ನು ತನ್ನ ಮಾತೃಭೂಮಿಯನ್ನಾಗಿ ಮಾಡಿಕೊಂಡು ಅದರ ಭವ್ಯ ಸಂಸ್ಕೃತಿಯ ಪುನರ್ಜ್ಜೀವನಕ್ಕೆ ಭಾರತೀಯರ ದಾಸ್ಯ ವಿಮೋಚನೆಗೆ , ನಲವತ್ತು ವರ್ಷಕಾಲ ಅವಿಶ್ರಾಂತವಾಗಿ ದುಡಿದ ಐರಿಷ್ ಮಹಿಳೆ. ತೀಕ್ಷ್ಣ ಬುದ್ಧ್ದಿ, ದಿಟ್ಟತನ, ಸಂಘಟನಾ ಶಕ್ತಿ, ಬೆರಗುಗೊಳಿಸುವ ವಾಕ್ಚಾತುರ್ಯ ಇವೆಲ್ಲವನ್ನು ಹೊಂದಿದ ಅಸಾಧಾರಣ ಪ್ರತಿಭಾವಂತೆ. ಹೀಗೆ ಇವರು ಮಾತ್ರವಲ್ಲದೆ, ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ವಿಜಯಲಕ್ಷ್ಮೀ ಪಂಡಿತ್, ಇಂಧಿರಾಗಾಂಧಿ, ಸುಚೇತ ಕೃಪಲಾನಿ, ಅರುಣಾ ಆಸಫ್ ಅಲಿ, ಕ್ಯಾಪ್ಟನ್ ಲಕ್ಷ್ಮೀ, ಮೇಡಂ ಕಾಮಾ ಮುಂತಾದವರು ರಾಷ್ಟ್ರ ವಿಮೋಚನಾ ಕಾರ್ಯದಲ್ಲಿ ಪಾತ್ರ ವಹಿಸಿದ್ದನ್ನು ನಾವು ನೋಡಬಹುದು.ಹೀಗೆ ಸ್ವಾತಂತ್ರ ಸಂಗ್ರಾಮದಿಂದ ಪ್ರಾರಂಭಗೊಂಡ ಮಹಿಳೆಯ ಸೇನೆಯಲ್ಲಿನ ಭಾಗವಹಿಸುವಿಕೆ ಇವರೆಗೂ ಮಹತ್ತರ ಬದಲಾವಣೆಯನ್ನು ಮಾಡಿದೆ .
ಈಗ.....
ಬಿಎಸ್ಎಫ್ನಲ್ಲಿ ಮಹಿಳಾ ಯೋಧರು
ಎಲ್ಲ ಕ್ಷೇತ್ರದಲ್ಲಿ ಈಗ ಮಹಿಳೆಯರು ಪುರುಷರ ಸಮನಾಗಿದ್ದಾರೆ. ಮಹಿಳೆಯರಿಗೆ ಯಾವ ಕ್ಷೇತ್ರಗಳೂ ನಿಷಿದ್ಧವಾಗಿಲ್ಲ. ಆದರೆ, ಸೇನೆಯಲ್ಲಿ ಮಾತ್ರ ಮಹಿಳೆಯರ ಪಾಲ್ಗೊಳ್ಳುವಿಕೆ ಅಷ್ಟಕಷ್ಟೆ ಎಂಬತ್ತಿತ್ತು. ಯುದ್ಧ ರಂಗದಲ್ಲಿ ಹೋರಾಡುವ ಯೋಧರಿಗೆ ನೆರವಾಗುವ ಕೆಲಸಗಳನ್ನು ಮಾತ್ರ ಅವರಿಗೆ ಕೊಡಲಾಗುತ್ತಿತ್ತು. ಆದರೆ, ಈಗ ಭಾರತದ ಬಿಎಸ್ಎಫ್ (ಗಡಿ ಭದ್ರತಾ ಪಡೆ ) ಆರಂಭಿಸಿದ ಕಾರಣ, ಇಲ್ಲಿ ಮಹಿಳೆಯರೂ ಪುರುಷ ಸೇನಾನಿಗಳಂತೆಯೇ ಗನ್ ಹಿಡಿದು ಓಡಾಡಲು ಸಾಧ್ಯವಾಗಿದೆ.
ಈವರೆಗೆ ಬಿಎಸ್ಎಫ್ನಲ್ಲಿ ಮಹಿಳಾ ಯೋಧರು ಇರಲಿಲ್ಲ. ಇಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಬಹಳ ದಿನಗಳಿಂದ ಕೇಳಿ ಬರುತ್ತಿತ್ತು.ಆದರೆ, ಇದಕ್ಕೆ ಹೆಚ್ಚು ಬಲ ಬಂದಿದ್ದು ಒಂದು ವರ್ಷದಿಂದ ಈಚೆಗೆ. ಬಿಎಸ್ಎಫ್ನಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವುದರ ಹಿಂದೆ ಕೆಲವು ಕಾರಣಗಳಿದ್ದವು. ಅವುಗಳೆಂದರೆ, ಕೇವಲ ಯುದ್ಧ ಸಂಬಂಧಿ ಕೆಲಸಗಳಿಗೆ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಗಡಿಯಲ್ಲಿರುವ ರೈತರ ಹಿತಾಸಕ್ತಿಯೂ ಇದೆ.
ಪಂಜಾಬ್ನ ಅಮೃತಸರ ಜಿಲ್ಲೆಯಲ್ಲಿ ಪಾಕ್ ಮತ್ತು ಭಾರತ ಹಂಚಿಕೊಂಡಿರುವ ಅಂತಾರಾಷ್ಟ್ರೀಯ ಗಡಿಯಿಂದ ಈಚೆ ೧೫೦ ಮೀಟರ್ ದೂರದಲ್ಲಿ ತಂತಿಬೇಲಿ ಹಾಕಲಾಗಿದೆ. ತಂತಿಬೇಲಿ ಆಚೆ ಇರುವ ಹೊಲಗಳಿಗೆ ಹೋಗುವ ರೈತರನ್ನು ತಡೆದು, ಪರೀಕ್ಷಿಸಿ ಬಿಡುವವರು ಈ ಬಿಎಸ್ಎಫ್ ಯೋಧರು. ಆದರೆ, ರೈತ ಮಹಿಳೆಯರನ್ನು ಯೋಧರು ಪರೀಕ್ಷೆ ಮಾಡುವ ಹಾಗಿರಲಿಲ್ಲ. ಹೀಗಾಗಿ, ರೈತ ಮಹಿಳೆಯರು ತಮ್ಮ ಹೊಲಗಳಿಗೆ ಹೋಗಿ, ಪತಿಯಂದಿರಿಗೆ ನೆರವಾಗಲು ಕಷ್ಟವಾಗುತ್ತಿತ್ತು. ಹೀಗಾಗಿ ಗಡಿಯಲ್ಲಿನ ರೈತರು ಮಹಿಳಾ ಯೋಧರನ್ನು ನೇಮಿಸಿ ಎಂಬ ಬೇಡಿಕೆ ಒಂದು ವರ್ಷದಿಂದ ತೀವ್ರ ಹೆಚ್ಚಿತ್ತು. ಇದರಿಂದ ಬಿಎಸ್ಎಫ್ಗೆ ಪ್ರಥಮ ಮಹಿಳಾ ಪಡೆ ನಿಯೋಜನೆಗೊಂಡಿತು.
ಈಗಾಗಲೇ ಸೆಪ್ಟಂಬರ್ ೧೧ರಂದು ೧೯ರಿಂದ ೨೩ ವರ್ಷ ವಯಸ್ಸಿನೊಳಗಿನ ೧೭ ಮಹಿಳೆಯರಿರುವ ಪಡೆಯನ್ನು ಗಡಿ ಕಾವಲಿಗೆ ನಿಯೋಜಿಸಲಾಗಿದೆ. ಸದ್ಯಕ್ಕೆ, ಮಹಿಳಾ ಬಿಎಸ್ಎಫ್ ಯೋಧರ ಮುಖ್ಯ ಕೆಲಸ ಹೊಲಗಳಿಗೆ ತೆರಳುವ ರೈತ ಮಹಿಳೆಯರನ್ನು ಪರೀಕ್ಷಿಸುವುದು ಮತ್ತು ಕಾವಲು ಕಾಯುವುದು. ಆದರೆ, ತುರ್ತು ಪರಿಸ್ಥಿತಿ ಎದುರಾದರೆ ಯುದ್ಧಕ್ಕೂ ಅವರನ್ನು ಬಳಸಿಕೊಳ್ಳಲು ಬಿಎಸ್ಎಫ್ ನಿರ್ಧರಿಸಿದೆಯಂತೆ. ಇದಕ್ಕಾಗಿ ಈಗಾಗಲೇ ೭೦೦ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಇದಕ್ಕಾಗಿ ಪಂಜಾಬ್ನ ಹೋಶಿಯಾರ್ಪುರದ ಖಾಕ್ರಾನ್ ಎಂಬಲ್ಲಿ ೧೯ರಿಂದ ೨೩ ವರ್ಷದ ನಡುವಿನ ೭೦೦ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಸದ್ಯ ಬಿಎಸ್ಎಫ್ನ ೩೨ ಮಹಿಳೆಯರ ಪ್ರಥಮ ಬ್ಯಾಚನ್ನು ಕೆಲಸಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ ೧೭ ಮಹಿಳಾ ಕಾನ್ಸ್ಟೆಬಲ್ಗಳನ್ನು ಅಮೃತಸರ ಅಂತಾರಾಷ್ಟ್ರೀಯ ಗಡಿಯ ಕಾವಲಿಗೆ ಬಿಡಲಾಗಿದೆ. ಪಾಕಿಸ್ತಾನದೊಂದಿಗೆ ಪಂಜಾಬ್ ಹೊಂದಿರುವ ಅಂತಾರಾಷ್ಟ್ರೀಯ ಗಡಿ ಕಾವಲಿಗೆ ಶೀಘ್ರವೇ ಎಲ್ಲ ೧೪ ಮಹಿಳಾ ಯೋಧರ ಪಡೆ ನಿಯೋಜನೆಗೊಳ್ಳಲಿದೆ.
ಸದ್ಯಕ್ಕೆ ಮಹಿಳಾ ಬಿಎಸ್ಎಫ್ ಪಡೆಯ ಸೇವೆ ಪಂಜಾಬ್ ಮತ್ತು ಪಶ್ಚಿಮ ಬಂಗಾಳಕ್ಕೆ ಮಾತ್ರ ಇದೆ. ಪ.ಬಂಗಾಳದ ಮಹಿಳಾ ಬಿಎಸ್ಎಫ್ ಪಡೆ ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ. ಮಹಿಳಾ ಯೋಧರಿಗೆ ೯ ತಿಂಗಳು ತರಬೇತಿ ನೀಡಲಾಗಿದೆ. ತರಬೇತಿ ವೇಳೆ, ಇನ್ಸಾಸ್ (ಐಎನ್ಎಸ್ಎಎಸ್), ಎಕೆ-೪೭ ರೈಫಲ್ ಚಲಾವಣೆ, ಗ್ರೇನೆಡ್ ಎಸೆತ ಸೇರಿ ವಿವಿಧ ರೀತಿಯ ಕಠಿಣ ತರಬೇತಿ ನೀಡಲಾಗಿದೆ.
ಯೋಧೆಯರ ಡೈಲಿ ಡೇ...
೫೪ ಎಕರೆ ವಿಶಾಲ ಕ್ಯಾಂಪಸ್ನಲ್ಲಿ ೫ರಿಂದ ೬ ಮಹಿಳಾ ಯೋಧರಿಗೆ ಒಂದು ಫ್ಲಾಟ್ ನೀಡಲಾಗಿದೆ. ಒಂದು ಕೋಣೆಯನ್ನು ಇಬ್ಬರು ಹಂಚಿಕೊಳ್ಳಬೇಕು.
ಬೆಳಗ್ಗೆ ೫.೩೦ಕ್ಕೆ ಇವರ ದಿನಚರಿ ಆರಂಭವಾಗುತ್ತದೆ. ೫.೪೫ಕ್ಕೆ ವ್ಯಾಯಾಮ. ೮.೪೫ ಕ್ಕೆ ಕ್ವಾರ್ಟರ್ ಗಾರ್ಡ್ನಲ್ಲಿ ಸೇರುತ್ತಾರೆ. ಹೆಸರು ನೋಂದಾಯಿಸಿ ತಮ್ಮ ಆಯುಧಗಳನ್ನು ಪಡೆಯುತ್ತಾರೆ. ನಂತರ ಮುಂದಿನ ಸೂಚನೆಗಾಗಿ ಜನರಲ್ ಡ್ಯೂಟಿ ಕಾಂಪ್ಲೆಕ್ಸ್ನಲ್ಲಿ ಸೇರುತ್ತಾರೆ. ಅಲ್ಲಿ, ಬೆಟಾಲಿಯನ್ ಮುಖ್ಯಸ್ಥರು ಅವರಿಗೆ ಯಾರು ಯಾವ ಔಟ್ಪೋಸ್ಟ್ಗೆ ಹೋಗಬೇಕು ಎಂಬುದನ್ನು ಸೂಚಿಸುತ್ತಾರೆ. ನಂತರ ಖಾಕಿ ಧರಿಸಿದ ಮಹಿಳಾ ಯೋಧರು ತಂತಿ ಬೇಲಿಯ ಬೂತ್ಗಳಲ್ಲಿ ಹೊಲಕ್ಕೆ ತೆರಳುವ ಮಹಿಳೆಯರನ್ನು ಪರೀಕ್ಷಿಸಿ, ಅವರನ್ನು ಒಳಗೆ ಬಿಡುತ್ತಾರೆ.
ರೈತ ಮಹಿಳೆಯರು ಪ್ರತಿ ಬಾರಿ ಒಳಗೆ ಹೋದಾಗ ಮತ್ತು ಹೊರ ಬರುವಾಗ ಕಡ್ಡಾಯವಾಗಿ ಪರೀಕ್ಷಿಸಲಾಗುತ್ತದೆ. ಹೀಗೆ ಮಧ್ಯಾಹ್ನ ೩ ಗಂಟೆಯವರೆಗೂ ರೈತ ಮಹಿಳೆಯರ ತಪಾಸಣೆ ನಡೆಯುತ್ತದೆ. ಅಂತಿಮವಾಗಿ ಮಹಿಳಾ ಯೋಧರ ದಿನದ ಕೆಲಸ ೬.೩೦ಕ್ಕೆ ಕೊನೆಗೊಳ್ಳುತ್ತದೆ. ಸಂಜೆ ಹೊತ್ತಿಗೆ ಗಡಿಯಲ್ಲಿನ ಜನಸಂದಣಿ ಕೂಡ ಕಡಿಮೆಯಾದಾಗ ಬಿಎಸ್ಎಫ್ ವ್ಯಾನ್ನಲ್ಲಿ ಯೋಧರು ಮರಳಿ ತಮ್ಮ ಕ್ಯಾಂಪ್ಗೆ ತೆರಳುತ್ತಾರೆ. ಅಲ್ಲಿ ಇವರು ದಿನದ ಕೆಲಸದ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಬೇಕು. ನಂತರ ರಾತ್ರಿ ಊಟ ಮಾಡಿ ತಮ್ಮ ಫ್ಲಾಟ್ಗಳಿಗೆ ಮರಳಿ ಟಿವಿ ಕ್ಷಿಸುತ್ತಾರೆ.
ರಕ್ಷಣಾ ಪಡೆಯಲ್ಲಿ...
ಅರೆಸೇನಾ ಪಡೆಗಳಂತೆ ಸೇನೆಯಲ್ಲೂ ಮಹಿಳೆಯರನ್ನು ಸೇರಿಸಿಕೊಳ್ಳಲಾಗುತ್ತಿದೆ. ಸೇನೆಯಲ್ಲಿ ಮಹಿಳೆಯರನ್ನು ಕೇವಲ ಅಧಿಕಾರಿಗಳ ಶ್ರೇಣಿಯಲ್ಲಿ ಮಾತ್ರ ಸೇರಿಸಿಕೊಳ್ಳಲಾ ಗುತ್ತಿದೆಯೇ ಹೊರತು ಕೆಳ ಹಂತದಲ್ಲಿ ನೇಮಿಸಿಕೊಳ್ಳುತ್ತಿಲ್ಲ. ೧೯೯೩ರಲ್ಲಿ ಭೂಸೇನೆ ಮತ್ತು ವಾಯು ಸೇನೆಗೆ ಮೊದಲ ಮಹಿಳಾ ಪಡೆ ಸೇರ್ಪಡೆಯಾಯಿತು. ಸದ್ಯ ೨೦೦೦ ಮಹಿಳಾ ಅಧಿಕಾರಿಗಳು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ, ವಾಯುಪಡೆಯಲ್ಲಿ ಮಹಿಳೆಯರನ್ನು ವಿಮಾನ ಹಾಗೂ ಹೆಲಿಕಾಪ್ಟರ್ ಪೈಲಟ್ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಅರೆಸೇನಾ ಪಡೆಯಲ್ಲಿ......
ಬಿಎಸ್ಎಫ್ ಮಾತ್ರವಲ್ಲದೆ ಅರೆ ಸೇನಾಪಡೆಯಲ್ಲೂ ಮಹಿಳಾ ಯೋಧರನ್ನು ನೇಮಿಸಿಕೊಳ್ಳಲಾಗಿದೆ. ಸದ್ಯ ಸಿಆರ್ಪಿಎಫ್ (ಕೇಂದ್ರ ಮೀಸಲು ಪಡೆ ) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)ಯಲ್ಲೂ ಮಹಿಳಾ ಯೋಧರ ತಂಡಗಳಿವೆ. ಸಿಐಎಸ್ಎಫ್ನಲ್ಲಿ ಸದ್ಯ ೪೫೦೦ ಮಹಿಳಾ ಯೋಧರಿದ್ದಾರೆ. ಅಂದರೆ ಒಟ್ಟಾರೆ ಸಿಐಎಸ್ಎಫ್ನ ಯೋಧರಲ್ಲಿ ಮಹಿಳಾ ಯೋಧರ ಸಂಖ್ಯೆ ಶೇ.೪ ರಷ್ಟಿದೆ. ಇದು ಅತಿ ಹೆಚ್ಚು ಮಹಿಳೆಯರನ್ನು ಹೊಂದಿರುವ ಕೇಂದ್ರೀಯ ರಕ್ಷಣಾ ಪಡೆಯಾಗಿದೆ.
ಸಿಆರ್ಪಿಎಫ್ನಲ್ಲಿ ಮಹಿಳಾ ಯೋಧರ ೨ ಬೆಟಾಲಿಯನ್ಗಳಿವೆ. ಈ ಸಂಖ್ಯೆಯನ್ನು ಹೆಚ್ಚಿಸಲು ಸರಕಾರ ಚಿಂತನೆ ನಡೆಸುತ್ತಿದೆ. ಸಿಆರ್ಪಿಎಫ್ನ ೨ ಲಕ್ಷ ಯೋಧರಲ್ಲಿ ಈಗ ೨೦೦೦ ಮಹಿಳೆಯರಿದ್ದಾರೆ.
- ಶಂಶೀರ್, ಬುಡೋಳಿ