ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಟಿಪ್ಪು ಸುಲ್ತಾನ್‌ರ 260ನೇ ಜಯಂತಿ ಕಾರ್ಯಕ್ರಮ: ಟಿಪ್ಪು ಕುರಿತ ಟೀಕೆಗೆ ಶೀಘ್ರ ಉತ್ತರ: ದೇವೇಗೌಡ

ಬೆಂಗಳೂರು: ಟಿಪ್ಪು ಸುಲ್ತಾನ್‌ರ 260ನೇ ಜಯಂತಿ ಕಾರ್ಯಕ್ರಮ: ಟಿಪ್ಪು ಕುರಿತ ಟೀಕೆಗೆ ಶೀಘ್ರ ಉತ್ತರ: ದೇವೇಗೌಡ

Wed, 11 Nov 2009 02:31:00  Office Staff   S.O. News Service

ಬೆಂಗಳೂರು, ನ.೧೦: ಮೈಸೂರು ಹುಲಿ ಟಿಪ್ಪು ಸುಲ್ತಾನ್‌ರನ್ನು ಇತಿಹಾಸದ ಪರಿಜ್ಞಾನ ವಿಲ್ಲದೆ ಟೀಕಿಸಿದ ಬಿಜೆಪಿ ನಾಯಕರು ಹಾಗೂ ಕೆಲ ಸಾಹಿತಿಗಳಿಗೆ ಪಕ್ಷದಿಂದ ಶೀಘ್ರದಲ್ಲೆ ಉತ್ತರ ನೀಡುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿ‌ಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಬೃಹತ್ ಬೆಂಗಳೂರು ನಗರ ಜನತಾದಳ ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ಪಕ್ಷದ ಕೇಂದ್ರ ಕಚೇರಿಯಲ್ಲಿಂದು ಏರ್ಪಡಿಸಲಾಗಿದ್ದ ಟಿಪ್ಪು ಸುಲ್ತಾನ್‌ರ 260 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸದ ಬಗ್ಗೆ ಸರಿಯಾಗಿ ತಿಳಿಯದ ಬಿಜೆಪಿ ನಾಯಕರು ಹಾಗೂ ಸಾಹಿತಿಗಳು ಟಿಪ್ಪು ಸುಲ್ತಾನ್ ಹಿಂದು ವಿರೋಧಿ, ಕನ್ನಡ ಭಾಷೆ ವಿರೋಧಿಯಾಗಿದ್ದನೆಂಬ ಹೇಳಿಕೆಗಳನ್ನು ನೀಡಿದ್ದಾರೆ. ಇವರಿಗೆ ಪಕ್ಷ ಶೀಘ್ರದಲ್ಲೆ ತಕ್ಕ ಉತ್ತರ ನೀಡಲಿದೆ ಎಂದು ದೇವೇಗೌಡ ನುಡಿದರು.

ಜಾತ್ಯತೀತ ಪರಿಕಲ್ಪನೆ ಹೊಂದಿರುವ ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಜನಾಂಗ ಇಂದು ಕೋಮುವಾದಿ ಶಕ್ತಿಗಳ ಅಟ್ಟಹಾಸದಿಂದ ಆತಂಕದ ವಾತಾವರಣದಲ್ಲಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೇವೇಗೌಡ ವಿಷಾದ ವ್ಯಕ್ತಪಡಿಸಿದರು.

ದೇಶದಲ್ಲಿರುವ ಮುಸ್ಲಿಮರು ಸಮಾಜ ಘಾತುಕರಲ್ಲ: ದೇಶದಲ್ಲಿರುವ ಮುಸ್ಲಿಂ ಸಮುದಾಯವನ್ನು ನಾನು ಪ್ರಧಾನಿಯಾಗಿ ಗಮನಿಸಿದ್ದೇನೆ. ಈ ಸಮುದಾಯ ಯಾವುದೆ   ಭಯೋತ್ಪಾದನೆಯಂತಹ ಸಮಾಜ ಘಾತುಕ ಚುಟುವಟಿಕೆಯಲ್ಲಿ  ಅಥವಾ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಲ್ಲ ಎಂದು ದೇವೇಗೌಡ ಹೇಳಿದರು.

ಮುಸ್ಲಿಂ ಜನಾಂಗಕ್ಕೆ ನನ್ನ ಅಧಿಕಾರ ಅವಧಿಯಲ್ಲಿ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಯಿತು. ಇದರಿಂದ ಈ ಜನಾಂಗಕ್ಕೆ ಹೆಚ್ಚು ಉಪಯುಕ್ತವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಕೂಡ 595 ಮುಸ್ಲಿಂ ಅಭ್ಯರ್ಥಿಗಳು ಗೆಲವು ಸಾಧಿಸುವಂತಾಯಿತು ಎಂದು ನುಡಿದರು.

ಪಕ್ಷ ಅಧಿಕಾರಕ್ಕೆ ಬರುವುದು ಖಚಿತ: ಯಾರು ಎಷ್ಟೆ ಒದ್ದರೂ, ನಮ್ಮ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಇದಕ್ಕಾಗಿ ನಾನು ನಿರಂತರ ಹೋರಾಟ ನಡೆಸುತ್ತೇನೆ ಎಂದು ದೇವೇಗೌಡ ಹೇಳಿದರು.

ನಮ್ಮ ಪಕ್ಷ ಮುಸ್ಲಿಂ ಸೇರಿದಂತೆ ಎಲ್ಲ ಜನಾಂಗದ ಸಮಸ್ಯೆಗಳಿಗೆ ಸ್ಪಂದಿಸಿದೆ, ಯಾವುದೆ  ಸಮುದಾಯಗಳಿಗೆ ಅನ್ಯಾಯವಾದಾಗ ಅದರ ವಿರುದ್ಧ ಹೋರಾಟ ನಡೆಸಿ, ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡಲಿದ್ದಾರೆ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಟಿಪ್ಪು ಸುಲ್ತಾನ್‌ರ ಜನ್ಮ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕೇಂದ್ರದಲ್ಲಿ ಪಕ್ಷ ಹೆಚ್ಚಿನ ಶಕ್ತಿ ಪಡೆದರೆ, ಅಲ್ಪಸಂಖ್ಯಾತರಾದ ಮುಸ್ಲಿಂ ಜನಾಂಗದ ಅಭಿವೃದ್ಧಿಗೆ ಅವಶ್ಯವಿರುವ ರಂಗನಾಥ್ ಮಿಶ್ರ ಅವರ ವರದಿಯನ್ನು ಶ್ರಮಿಸುವುದಾಗಿ ದೇವೇಗೌಡ ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಅಬ್ದುಲ್ ಅಝೀಂ ಮಾತನಾಡಿ, ಜಾತಿ, ಧರ್ಮದ ಆಧಾರದ ಮೇಲೆ ಆಡಳಿತ ನಡೆಸುತ್ತೇನೆಂಬ ಭಾವನೆ ಆಡಳಿತ ಪಕ್ಷಗಳು ಹೊಂದಿವೆ. ಆದರೆ ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂಬುದನ್ನು ಆಡಳಿತ ಪಕ್ಷಗಳು ತಿಳಿದುಕೊಳ್ಳಬೇಕು. ಇಂತಹ ಹಗಲುಗನಸು ಕಾಣುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಟಿಪ್ಪು ಸುಲ್ತಾನ್‌ರ ೫೫೦ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಸದನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಗಮನಕ್ಕೆ ತರಲಾಯಿತು. ಈ ಕುರಿತು ಯಡಿಯೂರಪ್ಪರಿಗೆ ಈಗಾಗಲೆ ವರದಿಯನ್ನು ನೀಡಿದ್ದು, ಪುನರ್ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಶಿಕ್ಷಣ ಮಂತ್ರಿಗಳ ಕಾರ್ಯಕ್ರಮಗಳ ಬಗ್ಗೆ ಎಚ್ಚರ ವಹಿಸಬೇಕು: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿರವರು ಪಠ್ಯಪುಸ್ತಕಗಳಲ್ಲಿನ ಟಿಪ್ಪು ಸುಲ್ತಾನ್‌ರಂತಹ ಮಹಾನ್ ಪುರುಷರ ಪಠ್ಯಗಳನ್ನು ತೆಗೆದುಹಾಕಲು ಹೊರಟಿದ್ದಾರೆ. ಅಲ್ಲದೆ ಪಠ್ಯಕ್ರಮವನ್ನು ಕೇಸರೀಕರಣ ಮಾಡಲು ಮುಂದಾಗಿದ್ದಾರೆ. ಈ ಕುರಿತು ಎಚ್ಚರ ವಹಿಸಬೇಕು ಎಂದು ಕರೆನೀಡಿದರು.

ಪ್ರಥಮ ಸ್ವಾತಂತ್ರ ಹೋರಾಟಗಾರ ಹಾಗೂ ರಾಜ್ಯದ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡಿರುವ ಟಿಪ್ಪು ಸುಲ್ತಾನ್‌ರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕೆಂದು ಸಿಂಧ್ಯಾ ಆಗ್ರಹಿಸಿದರು.

ದೇಶದಲ್ಲಿ ಕೋಮುವಾದಿ ಶಕ್ತಿಗಳು ಮೇಲುಗೈ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್‌ರ ಹುಟ್ಟು ಹಬ್ಬವನ್ನು ಆಚರಿಸಿ, ಅವರು ಹೊಂದಿದ್ದ ಜಾತ್ಯತೀತ ಪರಿಕಲ್ಪನೆಯನ್ನು ಜನತೆಗೆ ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದು ಸಿಂಧ್ಯಾ ಅಭಿಪ್ರಾಯಪಟ್ಟರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಸಾಹಿತಿ ಮರುಳ ಸಿದ್ದಪ್ಪ ಮಾತನಾಡಿ,  ಮಹಾತ್ಮಾ ಗಾಂಧಿ, ಬಸವಣ್ಣ ಮುಂತಾದವರ ಜನ್ಮ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸುತ್ತೇವೆ. ಆದರೆ ದೇಶ ಹಾಗೂ ರಾಜ್ಯಕ್ಕಾಗಿ ತನ್ನ ಪ್ರಾಣವನ್ನೆ ನೀಡಿದ ಟಿಪ್ಪುಸುಲ್ತಾನ್‌ರ ಜಯಂತಿಯನ್ನು ಆಚರಿಸಲು ಸರಕಾರ ಮನಸ್ಸು ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸ್ವಾತಂತ್ರ ಹೋರಾಟಗಾರರ ಸ್ಫೂರ್ತಿಯಾಗಿದ್ಧ ಟಿಪ್ಪು ಸುಲ್ತಾನ್ ಮಾಜಿ ಉನ್ನತ ಶಿಕ್ಷಣ ಸಚಿವ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಹಾಗೂ ಹಲವು ಸಾಹಿತಿಗಳು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದರು. ಆಧಾರವಿಲ್ಲದೆ, ಇತಿಹಾಸವನ್ನು ಸರಿಯಾಗಿ ಅರಿಯದೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು, ಮೂರ್ಖತನದ ಪರಮಾವಧಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಇತಿಹಾಸ ಉಪನ್ಯಾಸಕ ಪ್ರೊ.ಎನ್.ವಿ.ನರಸಿಂಹಯ್ಯ, ಜೆಡಿ‌ಎಸ್ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ, ವಿಧಾನಪರಿಷತ್ ಉಪಸಭಾಪತಿ ಪುಟ್ಟಣ್ಣ, ಶಾಸಕ ಝಮೀರ್ ಅಹ್ಮದ್ ಖಾನ್, ಮುಖಂಡರಾದ ಕರಡಿ ಸಂಗಣ್ಣ, ಎಚ್.ಸಿ.ನೀರಾವರಿ, ಮಾಜಿ ಶಾಸಕ ಚಂದ್ರಣ್ಣ, ಬೆಂಗಳೂರು ನಗರ ಜೆಡಿ‌ಎಸ್ ಅಲ್ಪಸಂಖ್ಯಾತರ ವರ್ಗಗಳ ವಿಭಾಗದ ಅಧ್ಯಕ್ಷ ದಸ್ತಗೀರ್ ಖಾನ್ ಮುಂತಾದವರು ಉಪಸ್ಥಿತರಿದ್ದರು.


Share: