ಮಂಗಳೂರು, ನ.೧೫ : ಹೊರಜಿಲ್ಲೆಯಲ್ಲಿ ನಡೆಯುವ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಸಂಘಪರಿವಾರ ಸಂಘಟನೆಗಳಿಗೆ ಸೇರಿದ್ದನ್ನೆಲಾದ ದುಷ್ಕರ್ಮಿಗಳ ತಂಡವೊಂದು ಬಸ್ಸಿನಿಂದ ಹೊರಗೆಳೆದು ಬರ್ಬರ ಹಲ್ಲೆ ನಡೆಸಿದ ಘಟನೆ ರವಿವಾರ ಸಂಜೆ ವಾಮಂಜೂರಿನಲ್ಲಿ ನಡೆದಿದೆ.
ತನ್ಮಧ್ಯೆ ಈ ಕೃತ್ಯವನ್ನು ಪ್ರತಿರೋಧಿಸುವ ಭರಾಟೆಯಲ್ಲಿ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿದ್ದು, ಘಟನೆಯಿಂದ ಭಯಭೀತರಾದ ಸ್ಥಳೀಯ ಅಂಗಡಿ ಮುಂಗಟ್ಟುಗಳ ಮಾಲಿಕರು ತಮ್ಮ ಅಂಗಡಿ-ಕಚೇರಿಗಳನ್ನು ಮುಚ್ಚಿದ್ದಾರೆ. ಅಲ್ಲಲ್ಲಿ ಗುಂಪು ಸೇರಿದ್ದ ಯುವಕರನ್ನು ಪೊಲೀಸರು ಚದುರಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪಣಂಬೂರು ಡಿವೈಎಸ್‌ಪಿ ಗಿರೀಶ್ ಕೆ. ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹಲ್ಲೆಗೊಳಗಾದ ಕಾಲೇಜು ವಿದ್ಯಾರ್ಥಿಗಳನ್ನು ಅಡ್ಡೂರಿನ ಇಬ್ರಾಹಿಂ ಎಂಬವರ ಮಗ ರಿಝ್ವಾನ್, ಕುಪ್ಪೆಪದವಿನ ರಫಿಕ್ ಎಂಬವರ ಮಗ ರಶೀದ್ ಮತ್ತು ಕೈಕಂಬ ಕಂದಾವರದ ಮಯ್ಯದ್ದಿ ಎಂಬವರ ಮಗ ಮುಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದ್ದು, ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿನಿಯರಾದ ದೀಪಿಕಾ ಮತ್ತು ಶಾಂತಿ ಅವರಿಗೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ತಲೆ ಕೂದಲಿನ ಜುಟ್ಟು ಹಿಡಿದೆಳೆದು, ಕೆನ್ನೆಗೆ ಹೊಡೆದು ಅವಾಚ್ಯ ಶಬ್ದದಿಂದ ಬೈದಿದ್ದಾರೆ ಎನ್ನಲಾಗಿದೆ.
ಎಡಪದವಿನ ಸರಕಾರಿ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಯ ಮೂವರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯರು ರವಿವಾರ ಸಂಜೆ ಗುರುಪುರ ಕೈಕಂಬದಲ್ಲಿ ಬಸ್ಸು ಹತ್ತಿದ್ದಾರೆ. ಮತೀಯ ಸಂಘಟನೆಗಳಿಗೆ ಸೇರಿದ ಸ್ಥಳೀಯ ಯುವಕನೊಬ್ಬ ಬಸ್ಸಿಗೆ ಹತ್ತಿದ್ದನ್ನು ಗಮನಿಸಿ ‘ದೂರ ಹೋಗುವುದು?’ ಎಂದು ವಿದ್ಯಾರ್ಥಿಗಳಲ್ಲಿ ಕೇಳಿದ್ದಾನೆ. ವಿದ್ಯಾರ್ಥಿಗಳು ಸಹಜ ಉತ್ತರ ನೀಡಿದ್ದಾರೆ. ನಂತರ ವಾಮಂಜೂರಿನಲ್ಲಿ ಬಸ್ಸನ್ನು ತಡೆದು ನಿಲ್ಲಿಸಿದ ದುಷ್ಕರ್ಮಿಗಳು ಹಲ್ಲೆ ನಡೆಸಿ ಜಿಲ್ಲೆಯಲ್ಲಿ ಮತ್ತೆ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದೆಲ್ಲವೂ ಪೂರ್ವನಿಯೋಜಿತವಾದುದು ಎಂದು ಘಟನಾವಳಿಗಳು ಸಾಕ್ಷಿಯಾಗಿದೆ. ದುಷ್ಕರ್ಮಿಗಳು ಬೈಕ್ ಮತ್ತಿತರ ವಾಹನದಲ್ಲಿ ಆಗಮಿಸಿದ್ದರು ಎನ್ನಲಾಗಿದೆ.
ರಿಝ್ವಾನ್ ಹೇಳಿಕೆಪತ್ರಿಕೆಯೊಂದಿಗೆ ಮಾತನಾಡಿದ ರಿಝ್ವಾನ್ ‘ಹಾಸನದಲ್ಲಿ ನ.೧೭ರಂದು ರಾಜ್ಯಮಟ್ಟದ ಕ್ರೀಡಾಕೂಟ (ಹ್ಯಾಂಡ್‌ಬಾಲ್) ನಡೆಯಲಿದ್ದು, ಇಂದು ಮಂಗಳೂರಿನಲ್ಲಿ ಪ್ರಾಕ್ಟೀಸ್ ಮಾಡಿ ನಾಳೆ ಹಾಸನಕ್ಕೆ ಹೋಗುವುದು ಎಂದು ದೈಹಿಕ ಶಿಕ್ಷಕ ಪ್ರೇಮನಾಥ ಸಾರ್ ಹೇಳಿದ್ದರು.
ಅದರಂತೆ ನಾವು ಐದು ಮಂದಿ ಗುರುಪುರ ಕೈಕಂಬದಲ್ಲಿ ೩ ಗಂಟೆಗೆ ಎಕ್ಸ್‌ಪ್ರೆಸ್ ಬಸ್ಸು ಹತ್ತಿದ್ದೇವೆ. ಆವಾಗ ಬಜರಂಗ ದಳದ ಕಾರ್ಯಕರ್ತ ಮೋಹನ ಎಂಬಾತ ನಮ್ಮ ಬಳಿ ಬಂದು ದೂರ ಹೋಗುವುದು ಎಂದು ಕೇಳಿದ. ನಾವು ಮಂಗಳೂರಿಗೆ ಹೋಗಿ ಹಾಸನಕ್ಕೆ ತೆರಳುವ ವಿಷಯ ಹೇಳಿದೆವು. ಅದೇ ಬಸ್ಸಿಗೆ ಅವನೂ ಹತ್ತಿದ. ವಾಮಂಜೂರಿನಲ್ಲಿ ಎಕ್ಸ್‌ಪ್ರೆಸ್ ಬಸ್ಸಿಗೆ ನಿಲುಗಡೆ ಇಲ್ಲ. ಆದರೂ ೩.೩೦ರ ವೇಳೆಗೆ ಬಜರಂಗ ದಳದವರು ಬಸ್ಸನ್ನು ತಡೆದು ನಿಲ್ಲಿಸಿ ನಮಗೆ ಐದು ಮಂದಿಗೆ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದಿದ್ದಾರೆ.
ನನ್ನ ಮತ್ತು ಸಾದಿಕ್‌ನ ಮರ್ಮಾಂಗಕ್ಕೆ ತುಳಿದಿದ್ದಾರೆ. ನೆಲಕ್ಕೆ ಕೆಡವಿ ಬಡಿದಿದ್ದಾರೆ. ರಶೀದ್‌ನಿಗೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಮಾರಕ ಆಯುಧದಿಂದ ಕಡಿಯಲು ಯತ್ನಿಸಿದ್ದಾರೆ. ಈಗ ನಮಗೆ ನಡೆಯಲಿಕ್ಕೂ ಆಗುವುದಿಲ್ಲ. ಹಲ್ಲೆ ನಡೆಸಿದವರ ಪೈಕಿ ಮೋಹನ್ ಅಲ್ಲದೆ ದೀಪಕ್ ಮತ್ತು ಕಾರ್ತಿಕ್ ಎಂಬವರ ಹೆಸರು ನಮಗೆ ತಿಳಿದಿದೆ. ಉಳಿದವರ ಮುಖ ಪರಿಚಯವಿದೆ’ ಎಂದು ಹೇಳಿಕೊಂಡಿದ್ದಾನೆ.
ದೈಹಿಕ ಶಿಕ್ಷಕರ ಹೇಳಿಕೆಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದೈಹಿಕ ಶಿಕ್ಷಕ ಪ್ರೇಮನಾಥ್ ‘ನಾನಿಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದೆ. ವಿದ್ಯಾರ್ಥಿಗಳನ್ನು ಸಂಜೆ ಅಲೋಶಿಯಸ್ ಕಾಲೇಜಿಗೆ ಬರಲು ತಿಳಿಸಿದ್ದೆ. ಅಲ್ಲೊಂದು ಪ್ರಾಕ್ಟೀಸ್ ಮುಗಿಸಿ ಹಾಸನಕ್ಕೆ ಹೋಗಲು ನಿರ್ಧರಿಸಿದ್ದೆವು. ಅದರ ಮಧ್ಯೆ ಈ ದುರ್ಘಟನೆ ನಡೆದಿದೆ. ಹಲ್ಲೆಗೊಳಗಾದ ಮೂವರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರೆ, ಪೊಲೀಸರ ಸೂಚನೆಯ ಮೇರೆಗೆ ವಿದ್ಯಾರ್ಥಿನಿಯರು ಮಂಗಳೂರು ಗ್ರಾಮಾಂತರ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದಾರೆ’ ಎಂದಿದ್ದಾರೆ.
‘ಇಂಥ ಘಟನೆ ನಡೆಯಬಾರದಿತ್ತು. ವಿದ್ಯಾರ್ಥಿಗಳು ನಿಜ ಸಂಗತಿ ಹೇಳಿದ್ದರೂ ಕೂಡ ದುಷ್ಕರ್ಮಿಗಳು ಹೊಡೆದು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳದಂತೆ ಮಾಡಿದ್ದಾರೆ’ ಎಂದು ಪ್ರೇಮನಾಥ್ ತಿಳಿಸಿದ್ದಾರೆ.
ಡಿವೈಎಸ್‌ಪಿ ಹೇಳಿಕೆಪರಿಸ್ಥಿತಿ ಇದೀಗ ಶಾಂತವಾಗಿದೆ. ವಾಮಂಜೂರು ಮತ್ತಿತರ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಬಿಗುಗೊಳಿಸಲಾಗಿದೆ. ದುಷ್ಕರ್ಮಿಗಳ ಗುರುತು ಪತ್ತೆ ಹಚ್ಚಲಾಗಿದ್ದು, ಬಂಧಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಡಿವೈಎಸ್‌ಪಿ ಗಿರೀಶ್ ತಿಳಿಸಿದ್ದಾರೆ.