ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಕೇಂದ್ರ ಸರ್ಕಾರದ ಸಭೆಗಳಲ್ಲಿ ಭಾಗವಹಿಸದ ಮುಖ್ಯಮಂತ್ರಿ - ರಾಜ್ಯದಲ್ಲಿ ಕುಳಿತು ಕೇಂದ್ರದ ಮೇಲೆ ಆರೋಪ

ಬೆಂಗಳೂರು: ಕೇಂದ್ರ ಸರ್ಕಾರದ ಸಭೆಗಳಲ್ಲಿ ಭಾಗವಹಿಸದ ಮುಖ್ಯಮಂತ್ರಿ - ರಾಜ್ಯದಲ್ಲಿ ಕುಳಿತು ಕೇಂದ್ರದ ಮೇಲೆ ಆರೋಪ

Sun, 02 May 2010 03:03:00  Office Staff   S.O. News Service

ಬೆಂಗಳೂರು,ಏ,೩೦:ಕೇಂದ್ರ ಸರ್ಕಾರ ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಪದೇ ಪದೇ ಆರೋಪ ಮಾಡುವ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸರ್ಕಾರ ಕರೆಯುವ ಸಭೆಗಳಲ್ಲಿ ಪಾಲ್ಗೊಳ್ಳದೇ ನಿರ್ಲಕ್ಷ್ಯವಹಿಸುವ ಮೂಲಕ ದ್ವಿಮುಖ ಧೋರಣೆ ಅನುಸರಿಸುತ್ತಿದ್ದಾರೆ.

ಪ್ರಧಾನಿ ಡಾ: ಮನಮೋಹನ್ ಸಿಂಗ್ ಕರೆಯುವ ಮುಖ್ಯಮಂತ್ರಿಗಳ ಸಭೆಯೂ ಸೇರಿದಂತೆ ಯಾವುದೇ ಸಭೆಗಳಿಗೂ ಯಡಿಯೂರಪ್ಪ ಹೋಗುತ್ತಿಲ್ಲ. ರಾಜ್ಯದಲ್ಲಿ ಕುಳಿತು ಕೇಂದ್ರ ಸರ್ಕಾರದ ಮೇಲೆ ಆರೋಪಗಳನ್ನು ಹೊರಿಸುತ್ತಾರೆ.

ಇಂತಹ ತಾರತಮ್ಯ, ಮಲತಾಯಿ ಧೋರಣೆ ನಿವಾರಿಸುವ ಸಲುವಾಗಿಯೇ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳ ಸಭೆ ಕರೆಯುತ್ತದೆ. ಇಂತಹ ಸಭೆಗಳಲ್ಲಿ ಪಾಲ್ಗೊಂಡು ರಾಜ್ಯಕ್ಕಾಗುವ ಅನ್ಯಾಯ ಸರಿಪಡಿಸುವ ಕೆಲಸ ಮಾಡುವುದು ಬಿಟ್ಟು ಅನಗತ್ಯ ಆರೋಪಗಳನ್ನು ಮಾಡುತ್ತಾ ಕಾಲ ಕಳೆಯುತ್ತಾರೆ.

ನಿನ್ನೆ ಕೇಂದ್ರದ ಯುಪಿ‌ಎ ಸರ್ಕಾರ ಎಲ್ಲಾ ರಾಜ್ಯಗಳ ವಿದ್ಯುತ್ ಸಚಿವರ ಸಭೆ ಕರೆದಿತ್ತು. ರಾಜ್ಯ ಭೀಕರ ವಿದ್ಯುತ್ ಕ್ಷಾಮ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯಕ್ಕೆ ಅಗತ್ಯವಾಗಿರುವ ವಿದ್ಯುತ್ ಪೂರೈಕೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬಹುದಿತ್ತು. ಇಂತಹ ಮಹತ್ವದ ಸಭೆ ಕರೆದ ಸಂದರ್ಭದಲ್ಲಿ ಗೃಹ ಸಚಿವ ಡಾ: ವಿ.ಎಸ್. ಆಚಾರ್ಯ, ದೆಹಲಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಿಶೇಷ ಪ್ರತಿನಿಧಿ ಧನಂಜಯ ಕುಮಾರ್ ಅವರನ್ನು ಮುಖ್ಯಮಂತ್ರಿ ಕಳುಹಿಸುತ್ತಾರೆ.

ಕೇಂದ್ರ ಸರ್ಕಾರ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದ ಸಂದರ್ಭದಲ್ಲಿ ಪ್ರತಿಪಕ್ಷ ನಿಯೋಗ ಕರೆದೊಯ್ಯುವುದಾಗಿ ಯಡಿಯೂರಪ್ಪ ಹೇಳುತ್ತಾರೆ. ಕೇಂದ್ರ ಯಾಕೆ ರಾಜ್ಯದ ಮನವಿಗೆ ಸ್ಪಂದಿಸಿಲ್ಲ ಎಂದು ವಿಚಾರಿಸಲು ಹೋಗುವುದಿಲ್ಲ.

ಕೇಂದ್ರದಲ್ಲಿ ಯಾವುದೇ ಪಕ್ಷದ ಆಡಳಿತವಿದ್ದರೂ ಕೂಡ ಹಿಂದಿನ ಮುಖ್ಯಮಂತ್ರಿಗಳು ಪ್ರಧಾನಿ ಕರೆಯುವ ಸಭೆಗಳಲ್ಲಿ ಪಾಲ್ಗೊಂಡು ಸಭೆಯ ಘನತೆ ಉಳಿಸಿಕೊಳ್ಳುತ್ತಿದ್ದರು. ಆದರೆ ಯಡಿಯೂರಪ್ಪ ಇಂತಹ ಸಭೆಗಳ ಘನತೆಯನ್ನೇ ಗಾಳಿಗೆ ತೂರಿದಂತೆ ವರ್ತಿಸುತ್ತಾರೆ.

ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಲು ಮಂತ್ರಿಗಳನ್ನು ಕಳುಹಿಸಿದರೆ ಎಷ್ಟರ ಮಟ್ಟಿಗೆ ಕೆಲಸ ಆಗುತ್ತದೆ. ಅದೇ ಮುಖ್ಯಮಂತ್ರಿಯವರೇ ಇಂತಹ ಸಭೆಗಳಲ್ಲಿ ಪಾಲ್ಗೊಂಡರೆ ಅದಕ್ಕೆ ಎಷ್ಟರ ಮಟ್ಟಿಗೆ ಮಾನ್ಯತೆ ಹಾಗೂ ಘನತೆ ದೊರೆಯುತ್ತದೆ. ಇದ್ಯಾವುದೂ ಯಡಿಯೂರಪ್ಪ ಅವರಿಗೆ ಅರ್ಥವಾದಂತೆ ಕಾಣುತ್ತಿಲ್ಲ.

ರಾಜ್ಯದ ಯಾವುದೇ ವಿಚಾರಗಳ ಸಭೆಗಳಲ್ಲೂ ಪಾಲ್ಗೊಳ್ಳದ ಯಡಿಯೂರಪ್ಪ, ಪ್ರತಿಯೊಂದಕ್ಕೂ ಕಾಗೆ ಗೂಬಕ್ಕನ ಉಪಕಥೆಗಳನ್ನು ಹೇಳುವ ಮೂಲಕ ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಧೆಯಲ್ಲಿ ಕೇಂದ್ರ ಸರ್ಕಾರವನ್ನು ವಿಶ್ವಾಸ ತೆಗೆದುಕೊಂಡು ಇನ್ನಾದರೂ ಮುನ್ನಡೆಯಬೇಕು.


Share: